Publish Date: Fri, 24 May 2024 (17:36 IST)
Updated Date: Fri, 24 May 2024 (17:40 IST)
ಚಿಕ್ಕಮಗಳೂರು: ಮೆಸ್ಕಾಂ ಲಾರಿ ಮತು ಓಮ್ನಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಚಿತ್ರದುರ್ಗದ ನಾಲ್ವರು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಸ್ಕಾಂ ಬಳಿ ನಡೆದಿದೆ.
ಧರ್ಮಸ್ಥಳಕ್ಕೆ ತೆರಳಿ ಚಿತ್ರದುರ್ಗಾಕ್ಕೆ ವಾಪಾಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಾರ್ಮಾಡಿ ಘಾಟಿ ಹತ್ತಿರ ಕೊಟ್ಟಿಗೆಹಾರ ದಾಟಿ ಮೂಡಿಗೆರೆ ಕಡೆಗೆ ಬರುತ್ತಿದ್ದಾಗ ಎದುರಿನಿಂದ ಬಂದ ಮೆಸ್ಕಾಂ ಲಾರಿಯು ಓಮ್ನಿ ವ್ಯಾನ್‌ಗೆ ಮೊದಲು ಡಿಕ್ಕಿ ಹೊಡೆದಿದೆ. ವ್ಯಾನಿನ ಹಿಂದೆ ಬರುತ್ತಿದ್ದ ಆಲ್ಟೊ ಕಾರು ಕೂಡ ವ್ಯಾನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಇನ್ನೂ ಅಪಘಾತದ ರಭಸಕ್ಕೆ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರನ್ನು ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ, ಮಾರ್ಗಮಧ್ಯ ಅವರೂ ಕೊನೆಯುಸಿರೆಳೆದರು ಎನ್ನಲಾಗಿದೆ.
ಮೃತರನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣ ಗ್ರಾಮದ ಹಂಪಯ್ಯ(65), ಪ್ರೇಮಾ(58), ಮಂಜಯ್ಯ(60) ಮತ್ತು ಪ್ರಭಾಕರ(45) ಎಂದು ಗುರುತಿಸಲಾಗಿದೆ.