Select Your Language

Notifications

webdunia
webdunia
webdunia
webdunia

ರಾಜಕಾಲುವೆ ಒತ್ತುವರಿ: ಲಿಂಬಾವಳಿ ರಾಜೀನಾಮೆಗೆ ಆಗ್ರಹಿಸಿ ಎಎಪಿ ಪಾದಯಾತ್ರೆ

ರಾಜಕಾಲುವೆ ಒತ್ತುವರಿ: ಲಿಂಬಾವಳಿ ರಾಜೀನಾಮೆಗೆ ಆಗ್ರಹಿಸಿ ಎಎಪಿ ಪಾದಯಾತ್ರೆ
bangalore , ಸೋಮವಾರ, 22 ನವೆಂಬರ್ 2021 (20:51 IST)
ಜುನ್ನಸಂದ್ರ ರಾಜಕಾಲುವೆ ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಬೇಕು ಹಾಗೂ ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿ ಜಾಣಕುರುಡು ತೋರುತ್ತಿರುವ ಶಾಸಕ ಅರವಿಂದ್‌ ಲಿಂಬಾವಳಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿಯು ಬೃಹತ್‌ ಪಾದಯಾತ್ರೆ ನಡೆಸಿತು.
 
ಗ್ರೀನ್ ವಿಲ್ಲೆ ಅಪಾರ್ಟ್ಮೆಂಟ್ ಸಮೀಪ ಪಾದಯಾತ್ರೆ ಆರಂಭಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ನಗರದ ಆಮ್‌ ಆದ್ಮಿ ಪಾರ್ಟಿ ಅಧ್ಯಕ್ಷ ಮೋಹನ್‌ ದಾಸರಿ, “ಕಳೆದ 15 ವರ್ಷಗಳಿಂದ ಮಹದೇವಪುರದ ಶಾಸಕರಾಗಿರುವ ಲಿಂಬಾವಳಿಯವರ ನಿಷ್ಕ್ರಿಯತೆಯಿಂದಾಗಿ ಕ್ಷೇತ್ರ ಸಂಪೂರ್ಣ ಹಿಂದುಳಿದಿದೆ. ಇಲ್ಲಿನ ರಸ್ತೆಗಳು ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ. ಒಳಚರಂಡಿ, ಪಾರ್ಕ್ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳೂ ಸಮರ್ಪಕವಾಗಿಲ್ಲ. ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಸೌಲಭ್ಯಗಳನ್ನು ತರುವುದರಲ್ಲಿ ಲಿಂಬಾವಳಿ ವಿಫಲರಾಗಿದ್ದಾರೆ. ಅಧಿಕಾರದಲ್ಲಿ ಮುಂದುವರೆದು ಕ್ಷೇತ್ರವನ್ನು ಹಾಳುಗೆಡವುದರ ಬದಲು ಅವರು ರಾಜೀನಾಮೆ ನೀಡುವುದೇ ಉತ್ತಮ. ಇಲ್ಲಿಯ ಜನರು ಹೆಚ್ಚು ತೆರಿಗೆ ಪಾವತಿಸಿಯೂ ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿ ಬದುಕಬೇಕಾಗಿರುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.
 
ಮಹದೇವಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್‌ ಮೃತ್ಯುಂಜಯ ಮಾತನಾಡಿ, “ಪ್ರಭಾವಿಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದರಿಂದ ಜುನ್ನಸಂದ್ರ ಹಾಗೂ ಹಾಲನಾಯಕನಹಳ್ಳಿ ಜನರು ಕೊಳಚೆ ನೀರಿನೊಂದಿಗೆ ಬದುಕಬೇಕಾಗಿದೆ. ಜುನ್ನಸಂದ್ರದ ಗ್ರೀನ್ ವಿಲ್ಲೇ ಲೇಔಟ್ ಕಡೆಗೆ ಹೋಗುವ 40 ಅಡಿ ರಸ್ತೆಯು ಈಗ ಒಂದು ಕೊಳಚೆ ಈಜುಕೊಳವಾಗಿ ಮಾರ್ಪಟ್ಟಿದೆ. ಜನರ ಹಿತ ಕಾಪಾಡಬೇಕಾದ ಜವಾಬ್ದಾರಿ ಹೊಂದಿರುವ ಶಾಸಕ ಅರವಿಂದ್‌ ಲಿಂಬಾವಳಿಯವರು ಜಾಣಕುರುಡು ತೋರುವ ಮೂಲಕ ಒತ್ತುವರಿ ಮಾಡುವವರಿಗೆ ಸಹಕರಿಸುತ್ತಿದ್ದಾರೆ” ಎಂದು ಆರೋಪಿಸಿದರು. 
 
“ಕಾಲುವೆಗಳು ಹಾಗೂ ರಾಜಕಾಲುವೆಯ ಒತ್ತುವರಿಯಿಂದಾಗಿ ಇಲ್ಲಿನ ರಸ್ತೆಗಳಲ್ಲಿ ಮಳೆಗಾಲದಲ್ಲಿ ಕನಿಷ್ಠ ಎರಡು ಅಡಿ ನೀರು ನಿಲ್ಲುತ್ತಿದೆ. ಇದರಿಂದ ಮಕ್ಕಳಿಗೆ ಹೊರಗಡೆ ಆಟವಾಡಲು, ಹಿರಿಯರಿಗೆ ವಾಕಿಂಗ್‌ ಮಾಡಲು ಕಷ್ಟವಾಗುತ್ತಿದೆ. ನೀರು ನಿಂತ ಪರಿಣಾಮ ಡೆಂಗ್ಯೂ, ಮಲೇರಿಯಾ ಮುಂತಾದ ಕಾಯಿಲೆಗಳು ಹರಡುತ್ತಿವೆ. ಇದಕ್ಕೆಲ್ಲ ಬಿಬಿಎಂಪಿ ಹಾಗೂ ಶಾಸಕ ಅರವಿಂದ ಲಿಂಬಾವಳಿಯವರ ನಿರ್ಲಕ್ಷ್ಯವೇ ಕಾರಣ. ತಹಸೀಲ್ದಾರ್‌, ಜಿಲ್ಲಾಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದಷ್ಟು ಶಾಸಕರು ಒತ್ತುವರಿ ಮಾಡಿದವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ” ಎಂದು ಅಶೋಕ್‌ ಮೃತ್ಯುಂಜಯ ಹೇಳಿದರು.
 
ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಜಗದೀಶ್‌ ವಿ. ಸದಂ, ಮುನೇಂದ್ರ, ಜ್ಯೋತೀಶ್‌ ಕುಮಾರ್‌, ಜಗದೀಶ್‌ ಶೆಟ್ಟಿ ಹಾಗೂ ಇತರೆ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ BDA ಮೇಲೆ ಎಸಿಬಿ ದಾಳಿ