30ಕ್ಕೂ ಹೆಚ್ಚು ಮಾಜಿ ಕಾರ್ಪೊರೇಟರ್‌ಗಳ ವಿರುದ್ಧ ಎಎಪಿಯಿಂದ ಪೊಲೀಸರಿಗೆ ದೂರು: ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ......
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಸಂಬಂಧಪಟ್ಟಂತೆ ತಪ್ಪಿತಸ್ಥ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಆಮ್ ಆದ್ಮಿ ಪಾರ್ಟಿಯ ಅಭಿಯಾನವು ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೃಹತ್ ಜನಸ್ತೋಮದೊಂದಿಗೆ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ ರಸ್ತೆ ಗುಂಡಿಗಳ ವಿರುದ್ಧ ಆಮ್ ಆದ್ಮಿ ಪಾರ್ಟಿ ನಡೆಸಿದ ಹಲವು ಪ್ರತಿಭಟನೆಗಳು ಹಾಗೂ ರಸ್ತೆ ಗುಂಡಿ ಹಬ್ಬ ಎಂಬ ವಿನೂತನ ಚಳವಳಿಗೆ ಉತ್ತಮ ಜನಮನ್ನಣೆ ದೊರೆತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಜನಬೆಂಬಲ ವ್ಯಕ್ತವಾಗುತ್ತಿದ್ದು, ಟ್ವಿಟರ್‌ನಲ್ಲಿ ನಮ್ಮ ಅಭಿಯಾನಗಳು ಟೆಂಡ್ ಆಗುತ್ತಿವೆ. ವಾಹನ ಸವಾರರ ಜೀವ ತೆಗೆಯುತ್ತಿರುವ ಗುಂಡಿಗಳ ಬಗ್ಗೆ ಜನರು ಪಕ್ಷಕ್ಕೆ ಮಾಹಿತಿ ನೀಡುತ್ತಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಗುಂಡಿಗಳಿಗೆ ಕಾರಣರಾದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. 75ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಈವರೆಗೆ ದಾಖಲಿಸಲಾಗಿದ್ದು, 30ಕ್ಕೂ ಹೆಚ್ಚು ಕಾರ್ಪೊರೇಟರ್‌ಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
ನವೆಂಬರ್ 9ರಂದು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಗುಂಡಿಗಳಿಗೆ ಸಂಬಂಧಿಸಿ ಮಾಜಿ ಕಾರ್ಪೊರೇಟರ್‌ಗಳ ವಿರುದ್ಧ ದೂರು ದಾಖಲಿಸಲಾಗಿದೆ. ಬಿಬಿಎಂಪಿಯ ಕೊನೆಯ ಅವಧಿಯಲ್ಲಿ ಕಾರ್ಪೊರೇಟರ್ ಆಗಿದ್ದವರು ಜನತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹಾ ಮೋಸ ಎಸಗಿ, ವಿಶ್ವಾಸ ದ್ರೋಹ ಮಾಡಿದ್ದಾರೆ. ಮುಂದಿನ ಹತ್ತು ದಿನಗಳಲ್ಲಿ ಬೆಂಗಳೂರು ಗುಂಡಿಮುಕ್ತ ಆಗದಿದ್ದರೆ, ಬೃಹತ್ ಜನಸ್ತೋಮದೊಂದಿಗೆ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತದೆ. ರಾಜ್ಯ ರಾಜಧಾನಿಯ ವರ್ಚಸ್ಸು ಉಳಿಸುವ ನಿಟ್ಟಿನಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮೋಹನ್ ದಾಸರಿ ಹೇಳಿದರು.
ಸರಿಯಾದ ರಸ್ತೆಗಳನ್ನು ಪಡೆಯುವುದು ಜನರ ಹಕ್ಕು. ಇವುಗಳನ್ನು ಪಡೆಯುವುದಕ್ಕಾಗಿ ಜನರು ವಾಹನ ತೆರಿಗೆ, ರಸ್ತೆ ತೆರಿಗೆ, ಆಸ್ತಿ ತೆರಿಗೆ, ಜಿಎಸ್‌ಟಿ ಮುಂತಾದವುಗಳನ್ನು ಕಟ್ಟಿರುತ್ತಾರೆ. ರಸ್ತೆ ದುರಸ್ತಿಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ ಸಾವಿರಾರು ಕೋಟಿ ರೂಪಾಯಿ ಖರ್ಚಾಗಿದ್ದರೂ ಗುಂಡಿಗಳು ಕಡಿಮೆಯಾಗಲಿಲ್ಲ. ಕೇವಲ ಒಂದು ತಿಂಗಳೊಳಗೆ ಕಿತ್ತುಹೋಗುವಷ್ಟು ಕಳಪೆ ಕಾಮಗಾರಿ ಮಾಡಲಾಗಿದೆ. ದುಡ್ಡು ಕೊಳ್ಳೆ ಹೊಡೆಯುವುದಕ್ಕಾಗಿ ಕಡಿಮೆ ಗುಣಮಟ್ಟದ ವಸ್ತುಗಳನ್ನು ರಸ್ತೆಗಾಗಿ ಬಳಸಲಾಗಿದೆ” ಎಂದು ಮೋಹನ್ ದಾಸರಿ ಹೇಳಿದರು.
ಒಂದೇ ವರ್ಷದಲ್ಲಿ 8 ಬೆಂಗಳೂರಿಗರ ಜೀವ ಈ ಬಿಬಿಎಂಪಿ ಕೆಟ್ಟ ರಸ್ತೆಗಳ ಮುಖಾಂತರ ತೆಗೆದುಕೊಂಡಿದೆ. 20,000 ಕೋಟಿ ಕಳೆದ 5 ವರ್ಷದಲ್ಲಿ ಬೆಂಗಳೂರಿನ ರಸ್ತೆಗಳಿಗೆ ಖರ್ಚು ಮಾಡಿದ್ದೀವಿ ಅಂತ ಹೇಳುತ್ತಾ ಇದೀರಾ ಅಲ, ಲೆಕ್ಕ ಕೊಡಿ, ದೊಡ್ಡಮಟ್ಟದ ತನಿಖೆ ಆಗಲೇ ಬೇಕು ಎಂದರು.
ರಾಜ್ಯಮಾಧ್ಯಮ ಸಂಚಾಲಕ ಜಗದೀಶ್ ವಿ ಮಾತನಾಡುತ್ತಾ ಸುಮಾರು 1000 ಕ್ಕೂ ಹೆಚ್ಚು ಬೆಂಗಳೂರಿಗರು ನಮ್ಮ ಸಹಯವಾಣಿಗೆ ರಸ್ತೆಗುಂಡಿಗಳ ಚಿತ್ರಗಳನ್ನ ಕಳುಹಿಸಿ ದೂರು ನೀಡಿದ್ದಾರೆ, ನಾವು ಕಾನೂನು ಘಟಕದ ಸಹಕಾರ ನೀಡುತ್ತೇವೆಂದರೂ ಅವರುಗಳು ಮುಂದೆ ಪೋಲಿಸು ಠಾಣೆಯಲ್ಲಿ ದೂರು ನೀಡಲು ಮುಂದಾಗಲಿಲ್ಲ. ಅದ ಪೋಲೀಸರ ಮೇಲಿನ ಹೆದರಿಕೆಯಾಗಿರಬಹುದು, ಸ್ಥಳೀಯ ರಾಜಕಾರಣಿಗಳ ಗುರಿಯಾಗಬಹುದೆಂದೋ ಮುಂದೆ ಬರಲಿಲ್ಲ. ನಮ್ಮ ವಾರ್ಡ ಮಟ್ಟದ ನಾಯಕರುಗಳು ಪೋಲಿಸ ಠಾಣೆಗೆ ಹೋಗಿ ಸ್ಥಳೀಯ ಬಿಬಿಎಂಪಿ ಸದಸ್ಯರುಗಳ ಮತ್ತು ಸಂಬಂದಪಟ್ಟ ಅಧಿಕಾರಿಗಳ ವಿರುದ್ದ ದೂರು ನೀಡಿದ್ದಾರೆ, ಇದು ಸಾಮಾನ್ಯ ವಿಷಯವಲ್ಲ, ಅವರ ಧೈರ್ಯಕ್ಕೆ ಬೆಂಗಳೂರಿಗರು ಅಭಾರರು. ಅಧಿಕಾರವಿಲ್ಲದೇ ಇಷ್ಟು ಕೆಲಸ ಮಾಡಬಹುದೆಂದರೆ, ಒಂದು ಅವಕಾಶ ಕೊಟ್ಟು ಗೆಲ್ಲಿಸಿದರೆ, ಒಂದೇ ಒಂದು ದಿನ ರಸ್ತೆಗುಂಡಿಗಳಿಲ್ಲದ ಉತ್ತಮ ರಸ್ತೆಗಳನ್ನ ಮಾಡಿ ತೋರಿಸುತ್ತೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಬೆಂಗಳೂರು ನಗರ ಉಪಾಧ್ಯಕ್ಷ ಬಿ ಟಿ ನಾಗಣ್ಣ ಮಾತನಾಡಿ ಗುಂಡಿಗಳಿಂದ ವಾಹನಗಳು ಹಾಳಾಗುತ್ತಿರುವುದು ಹಾಗೂ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದಷ್ಟೇ ಅಲ್ಲದೇ, ಅನೇಕ ವಾಹನ ಸವಾರರು ಕೈಕಾಲು ಮುರಿದುಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸುಮಾರು 7 ಮಂದಿ ಜೀವವನ್ನೇ ಕಳೆದುಕೊಂಡಿದ್ದಾರೆ. ಗುಂಡಿಗಳು ಬೆಂಗಳೂರಿಗರ ಜೀವಕ್ಕೆ ಸಂಚಕಾರ ತರುತ್ತಿದ್ದರೂ ಗಂಭೀರವಾಗಿ ಪರಿಗಣಿಸದ ಸರ್ಕಾರ ಹಾಗೂ ಪಾಲಿಕೆಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಜಗದೀಶ್ ಚಂದ್ರ, ಗೋಪಿನಾಥ್, ಸುಹಾಸಿನಿ , ಅಶೋಕ್ ಮೃತ್ಯುಂಜಯ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು