ಮಡಿಕೇರಿ: ಬ್ರೈನ್ ಡೆಡ್ ಆದ ಯುವಕನೊಬ್ಬ ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ಕೊಡಗಿನಲ್ಲಿ ನಡೆದಿದೆ. ಹೃದಯ, ಕಣ್ಣು, ಕಿಡ್ನಿ, ಚರ್ಮ, ಲಿವರ್‌ನಂತಹ ಮನುಷ್ಯನ ಅಂಗಾಂಗಳನ್ನು ದಾನ ಮಾಡುವುದನ್ನು ಕೇಳಿದ್ದೇವೆ. ಆದರೆ, ಕೊಡಗಿನ ಯುವಕನೋರ್ವ ತನ್ನ ಮೂಳೆಗಳನ್ನೇ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾನೆ. ಈ ಮೂಲಕ ಕ್ಯಾನ್ಸರ್‌ಪೀಡಿತ 6 ಮಕ್ಕಳ ಕಾಲುಗಳಿಗೆ ಬಲ ಬಂದಂತಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಗ್ರಾಮದ 33 ವರ್ಷದ ಯುವಕ ಈಶ್ವರ್ ಅಪಘಾತದಲ್ಲಿ ಗಾಯಗೊಂಡಿದ್ದು, ಬ್ರೈನ್ ಡೆಡ್ ಆಗಿದೆ.
ಹೀಗಾಗಿ ಕುಟುಂಬಸ್ಥರು ಸಾವಿನ ಸಂದರ್ಭದಲ್ಲಿ ಈಶ್ವರ್ನ ಮೂಳೆಗಳನ್ನ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಈ ರೀತಿ ಮೂಳೆ ದಾನ ಮಾಡಿರುವುದು ಕರ್ನಾಟಕ ರಾಜ್ಯದಲ್ಲೇ ಮೊದಲಾಗಿದೆ.
ಅಪಘಾತದಲ್ಲಿ ಡ್ರೈನ್ ಡೆಡ್ ಆಗಿದ್ದ ಯುವಕನ ಅಸ್ಥಿ (ಮೂಳೆ) ದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದು, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞರ ವಿಭಾಗದ ಮುಖ್ಯಸ್ಥ ಡಾ.ವಿಕ್ರಮ್ ಶೆಟ್ಟಿ ನೇತೃತ್ವದಲ್ಲಿ ಅಪರೂಪದ ದಾನವನ್ನು ಯಶಸ್ವಿಯಾಗಿ ಸಂಗ್ರಹಿಸಲಾಗಿದೆ. ಇದರಿಂದ ಕ್ಯಾನ್ಸರ್ ಪೀಡಿತ 6 ಮಕ್ಕಳ ಕಾಲುಗಳನ್ನು ಉಳಿಸಬಹುದು ಎಂದು ಅಸ್ಥಿ ಸಂಗ್ರಹಿಸಿದ ಬಳಿಕ ಡಾ.ಶೆಟ್ಟಿ ತಿಳಿಸಿದ್ದಾರೆ.