ಗದಗ: ಡಾ. ಬಿ.ಆರ್.ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡಿದ ಗೃಹಸಚಿವ ಅಮಿತ್ ಶಾ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು, ಶಾ ಅವರು ಅಂಬೇಡ್ಕರ್ ಪ್ರತಿಮೆ ಎದುರಿಗೆ ಮಂಡಿಯೂರಿ ಕುಳಿತು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟ ಮಂಗಳವಾರ ಕರೆ ನೀಡಿದ್ದ ಗದಗ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಮಂಗಳವಾರ ಬೆಳಿಗ್ಗೆ 6ಕ್ಕೆ ನಗರದ ಮುಳಗುಂದ ನಾಕಾ ಬಳಿ ಪ್ರತಿಭಟನೆ ಆರಂಭಗೊಂಡಿತು. ಪ್ರತಿಭಟನಕಾರರು ಅಮಿತ್ ಶಾ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಬಳಿಕ ನಗರದ ವಿವಿಧೆಡೆ ಬೈಕ್ ರ‍್ಯಾಲಿ ನಡೆಸಿ, ಕೊನೆಗೆ ಗಾಂಧಿ ವೃತ್ತದಲ್ಲಿ ಜಮಾಯಿಸಿದರು. ಬಿಜೆಪಿ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು.
ದೇಶದಲ್ಲಿ 25ಕೋಟಿಗೂ ಮಿಕ್ಕಿರುವ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಡಾ.ಬಿ.ಆರ್ ಅಂಬೇಡ್ಕರ್ ದೇವರಾಗಿದ್ದಾರೆ. ಅಂಬೇಡ್ಕರ್ ಅವರನ್ನು ಅವಮಾನಿಸುವುದನ್ನು ಸಹಿಸಲ್ಲ. ಅಮಿತ್ ಶಾ ದೇಶದ ಜನರೆದುರು ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ಪ್ರತಿಭಟನೆಯ ಕಿಚ್ಚು ದೇಶವ್ಯಾಪಿಯಾಗಲಿದೆ ಎಂದು ಸಮಾವೇಶದಲ್ಲಿ ಎಚ್ಚರಿಸಲಾಯಿತು.
ದಲಿತರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ. ಅಂಬೇಡ್ಕರ್ ಯಾರು ಅಂತ ಅಮಿತ್ ಶಾಗೆ ತಿಳಿಸಿಕೊಡುತ್ತೇವೆ ಎಂದು ಹೇಳುತ್ತ ಪ್ರತಿಭಟನಕಾರರು ಜೈ ಭೀಮ್ ಘೋಷಣೆ ಕೂಗಿದರು. ಭೀಮ್‌ರಾವ್ ಅವರ ಕುರಿತಾದ ಕ್ರಾಂತಿಗೀತೆ ಮೊಳಗಿಸಿದರು.