ಮುಂಬೈ: ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಪತ್ನಿಯೊಬ್ಬಳು ತನ್ನ ಮೂವರು ಅಪ್ರಾಪ್ತ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ಮುಂಬೈ ಸಮೀಪದ ಭಿವಂಡಿಯ ಫೆನೆ ಗ್ರಾಮದಲ್ಲಿ ನಡೆದೊದೆ. ರಾತ್ರಿ ಪಾಳಿಯಲ್ಲಿದ್ದ ಪತಿ ಶನಿವಾರ ಬೆಳಗ್ಗೆ ಮನೆಗೆ ವಾಪಸ್ಸಾದ ವೇಳೆ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಲಾಲ್ಜಿ ಬನ್ವಾರಿಲಾಲ ಭಾರತಿ ಅವರ ಪತ್ನಿ ಪುನಿತಾ (31 ವರ್ಷ) ಮತ್ತು ಪುತ್ರಿಯರಾದ ನಂದಿನಿ (12 ವರ್ಷ), ನೇಹಾ (7 ವರ್ಷ) ಮತ್ತು ಅನು (ನಾಲ್ಕು ವರ್ಷ) ಅವರೊಂದಿಗೆ ಫೆನೆ ಗಾಂವ್‌ನ ಚಾಲ್‌ನಲ್ಲಿ ವಾಸಿಸುತ್ತಿದ್ದರು.
ಶುಕ್ರವಾರ ಮನೆಯಿಂದ ಹೊರಟಿದ್ದ ಲಾಲ್ಜಿ ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ವಾಪಸಾದ ಬಳಿಕ ಮನೆಯ ಬಾಗಿಲನ್ನು ಬಡಿದಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕಿಟಿಕಿಯಲ್ಲಿ ಇಣುಕಿ ನೋಡಿದಾಗ ದಿಗ್ಭ್ರಮೆಗೊಂಡಿದ್ದಾರೆ.
ಈ ಬಗ್ಗೆ ಪೊಲೀಸ್ ತಂಡ ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದೆ. ಸ್ಥಳದಲ್ಲಿ 'ಪಂಚನಾಮ' ನಡೆಸಲಾಯಿತು ಮತ್ತು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಿವಂಗತ ಇಂದಿರಾ ಗಾಂಧಿ ಸ್ಮೃತಿ ಉಪಜಿಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಆತ್ಮಹತ್ಯೆಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಬಾರದು ಎಂಬ ಟಿಪ್ಪಣಿ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ವರದಿಗಳು ಸೂಚಿಸಿವೆ.