Select Your Language

Notifications

webdunia
webdunia
webdunia
webdunia

ಪಾಲಿಕೆಗೆ ನೂರಾರು ಕೋಟಿ ರೂಪಾಯಿಗಳ ನಕ್ಷೆ ಮಂಜೂರಾತಿ

ಪಾಲಿಕೆಗೆ ನೂರಾರು ಕೋಟಿ ರೂಪಾಯಿಗಳ ನಕ್ಷೆ ಮಂಜೂರಾತಿ
bangalore , ಬುಧವಾರ, 24 ನವೆಂಬರ್ 2021 (20:06 IST)
“ನ್ಯಾಯಾಲಯದ ಆದೇಶವೊಂದನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿ, ತಡೆಯಾಜ್ಞೆ ತೆಗೆದುಕೊಳ್ಳುವ ಹತ್ತಾರು ಅವಕಾಶಗಳಿದ್ದರೂ ಸಹ ಪಾಲಿಕೆಯ ಮುಖ್ಯ ಆಯುಕ್ತರು ಬಿಲ್ಡರ್ ಗಳ ಪರವಾದ ಆದೇಶವನ್ನು ಹೊರಡಿಸುವ ಮೂಲಕ ಪಾಲಿಕೆಗೆ ಪ್ರತೀ ವರ್ಷ ನೂರಾರು ಕೋಟಿ ವಂಚನೆಯಾಗುವ ನಿರ್ಣಯ ತೆಗೆದುಕೊಂಡು, ಹತ್ತಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಸಿರುವ ಹಗರಣ”
 
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ CREDAI ಸಂಸ್ಥೆಯ 360 ಕ್ಕೂ ಹೆಚ್ಚು ಬಿಲ್ಡರ್ ಗಳು, BRAI ಸಂಸ್ಥೆಯ 300 ಕ್ಕೂ ಹೆಚ್ಚು ಬಿಲ್ಡರ್ ಗಳು ಹಾಗೂ ಈ ಎರಡೂ ಸಂಸ್ಥೆಗಳೊಂದಿಗೆ ಗುರುತಿಸಿಕೊಳ್ಳದ ನೂರಾರು ಮಂದಿ ಬಿಲ್ಡರ್ ಗಳು ಬೃಹತ್ ವಾಣಿಜ್ಯ ಮತ್ತು  ಬೃಹತ್ ವಸತಿ ಕಟ್ಟಡಗಳ ಸಂಕೀರ್ಣಗಳು / ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಕಳೆದ ಹತ್ತಾರು ವರ್ಷಗಳಿಂದ ತೊಡಗಿಕೊಂಡಿದ್ದು, ಬಿಬಿಎಂಪಿಯ ನಗರ ಯೋಜನೆ ಇಲಾಖೆಗೆ ಸದರಿ ಬಿಲ್ಡರ್ ಗಳು ನ್ಯಾಯಯುತವಾಗಿ ಪಾವತಿಸಬೇಕಿದ್ದ ಕಟ್ಟಡ ನಿರ್ಮಾಣ ಸಂಬಂಧಿತ ನಕ್ಷೆ ಮಂಜೂರಾತಿ ಶುಲ್ಕದ ವಿನಾಯಿತಿ ಕೋರಿ, ಹತ್ತಕ್ಕೂ ಹೆಚ್ಚು ಮಂದಿ ಪ್ರತಿಷ್ಟಿತ ಬಿಲ್ಡರ್ ಗಳು ಪ್ರತ್ಯೇಕವಾಗಿ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ Writ Petition ಗಳನ್ನು ದಾಖಲಿಸಿದ್ದರು. 
 
ಈ ಎಲ್ಲಾ WP ಗಳನ್ನು Writ Petition ಸಂಖ್ಯೆ: 4601/2020 ರೊಂದಿಗೆ ಒಂದುಗೂಡಿಸಿದ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಚ್ಛ ನ್ಯಾಯಾಲಯವು ದಿನಾಂಕ 04/08/2021 ರಂದು ಆದೇಶವೊಂದನ್ನು ನೀಡಿ, ಯಾವುದೇ ಬಿಲ್ಡರ್ ಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಕ್ಷೆ ಮಂಜೂರಾತಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎಂಬ ತೀರ್ಪನ್ನು ನೀಡಿರುತ್ತದೆ.
 
ವಾಸ್ತವವಾಗಿ ನ್ಯಾಯಾಲಯದ ಈ ಆದೇಶವು ಪಾಲಿಕೆಯ ಆರ್ಥಿಕ ಹಿತಾಸಕ್ತಿಯನ್ನು ಬಲಿಕೊಡುವಂತದ್ದಾಗಿದ್ದು, ಆರ್ಥಿಕವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ದೊಡ್ಡ ಪೆಟ್ಟನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
 
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ಇಲಾಖೆಯಿಂದ ಮಂಜೂರಾಗುವ ನಕ್ಷೆ ಮಂಜೂರಾತಿ ಶುಲ್ಕವು ಪಾಲಿಕೆಗೆ 03ನೇ ಅತಿ ದೊಡ್ಡ ಆದಾಯದ ಮೂಲವಾಗಿದ್ದು, ವರ್ಷಂಪ್ರತಿ ಸರಾಸರಿ 600 ಕೋಟಿ ರೂಪಾಯಿಗಳಷ್ಟು ಆದಾಯವನ್ನು ಪಾಲಿಕೆಗೆ ತಂದುಕೊಡುತ್ತಿದೆ.
 
ಸೀಮಿತ ಆದಾಯದ ಮೂಲಗಳನ್ನು ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಹೊರತುಪಡಿಸಿ, OFC ಶುಲ್ಕ, ನಕ್ಷೆ ಮಂಜೂರಾತಿ ಶುಲ್ಕ ಇಂತಹ ಆದಾಯಗಳಿಂದಲೇ ಪಾಲಿಕೆಯ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು, ಪಾಲಿಕೆಯ ಅಧಿಕಾರಿ / ನೌಕರರ ವೇತನಗಳು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಬಳಸಬೇಕಿರುತ್ತದೆ.
 
ಪಾಲಿಕೆಯ ಹಿತಾಸಕ್ತಿಗೆ ವಿರುದ್ಧವಾಗಿರುವ ನ್ಯಾಯಾಲಯದ ಆದೇಶವನ್ನು ಪಾಲಿಕೆಯ ಮುಖ್ಯ ಆಯುಕ್ತರು ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲು ಹಾಗೂ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆಯನ್ನು ತರುವಂತಹ ಹತ್ತಾರು ಅವಕಾಶಗಳಿದ್ದರೂ ಸಹ ಪಾಲಿಕೆಯ ಮುಖ್ಯ ಆಯುಕ್ತರು ಇದರತ್ತ ಗಮನ ಕೊಡದೇ ಕಳೆದ ಒಂದು ತಿಂಗಳ ಹಿಂದೆ ನಡೆದಂತಹ CREDAI ಸಂಸ್ಥೆಯ ಸದಸ್ಯರೊಂದಿಗಿನ ಸಭೆಯಲ್ಲಿ ಬಿಲ್ಡರ್ ಗಳ ಪರವಾದ ನಿಲುವನ್ನು ಪಡೆದಿರುವಂತಹದ್ದು ನಿಜಕ್ಕೂ ಆಘಾತಕಾರಿಯಾದಂತಹ ವಿಷಯವಾಗಿರುತ್ತದೆ.
 
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ಇಲಾಖೆಯ ಜಂಟಿ ನಿರ್ದೇಶಕರು (ಉತ್ತರ) ಆಗಿ ಕಾರ್ಯ ನಿರ್ವಹಿಸುತ್ತಿರುವ “ನಗರ ಯೋಜನೆ ಇಲಾಖೆ”ಯಿಂದ “ಎರವಲು ಸೇವೆ”ಯಿಂದ ಬಂದಿರುವಂತಹ ಶ್ರೀ. ಮಂಜೇಶ್ ರವರು ನಿರಂತರವಾಗಿ ಪಾಲಿಕೆಯ ಹಿತಾಸಕ್ತಿಗೆ ವಿರುದ್ಧವಾದ ನಡೆಗಳನ್ನು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದು, ಅವರ ಕುತಂತ್ರದ ಫಲದಿಂದ ಪಾಲಿಕೆಯ ಮುಖ್ಯ ಆಯುಕ್ತರು ಮಂಜೇಶ್ ರವರೊಂದಿಗೆ ಶಾಮೀಲಾಗಿ ಪ್ರತಿಷ್ಟಿತ ಬಿಲ್ಡರ್ ಗಳಿಂದ ಕೋಟ್ಯಾಂತರ ರೂಪಾಯಿಗಳಷ್ಟು ಹಣವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆದು, 2008 ಕ್ಕೂ ಮೊದಲು ಇದ್ದಂತಹ ನಕ್ಷೆ ಮಂಜೂರಾತಿ ಶುಲ್ಕದ ಪದ್ಧತಿಯಂತೆ ಶುಲ್ಕ ವಸೂಲಿ ಮಾಡುವ ನಿರ್ಧಾರವನ್ನು ತೆಗೆದುಕೊಂಡು, ಈ ಸಂಬಂಧ ಆದೇಶವನ್ನೂ ಸಹ ಹೊರಡಿಸಿರುತ್ತಾರೆ.
 
ವಿಶೇಷವೆಂದರೆ ಪಾಲಿಕೆಯ ಮುಖ್ಯ ಆಯುಕ್ತರು ಬಹಳ ಗೌಪ್ಯವಾಗಿ ಹೊರಡಿಸಿರುವ ಈ ಆದೇಶದ ಪ್ರತಿಯಲ್ಲಿ ದಿನಾಂಕವನ್ನು ನಮೂದಿಸಿಲ್ಲದಿರುವುದು ಹಾಗೂ ರವಾನೆ ಸಂಖ್ಯೆ (Dispatch Number)ಯನ್ನೂ ಸಹ ನಮೂದಿಸದೇ ಆದೇಶವನ್ನು ಹೊರಡಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.
 
ಪಾಲಿಕೆಯ ಮುಖ್ಯ ಆಯುಕ್ತರ ಆದೇಶದಂತೆ 2008 ಕ್ಕೂ ಹಿಂದಿನ ನಕ್ಷೆ ಮಂಜೂರಾತಿ ಶುಲ್ಕವನ್ನು ಸಂಗ್ರಹಿಸಲು ಪಾಲಿಕೆ ಮುಂದಾಗುತ್ತಿರುವ ಪರಿಣಾಮದಿಂದ ಈಗಿನ ನಕ್ಷೆ ಮಂಜೂರಾತಿ ಶುಲ್ಕದ ಶೇ. 22 ರಷ್ಟು ಶುಲ್ಕವನ್ನು ಮಾತ್ರವೇ ಪಾಲಿಕೆಯು ಸಂಗ್ರಹಿಸಬೇಕಾಗಿರುತ್ತದೆ.
 
ಪಾಲಿಕೆಯ ಮುಖ್ಯ ಆಯುಕ್ತರ ಆದೇಶದಂತೆ ಸಂಬಂಧಪಟ್ಟ ಬಿಲ್ಡರ್ ಗಳು ಪಾಲಿಕೆಗೆ ಮುಚ್ಚಳಿಕೆ ಪತ್ರವನ್ನು ಬರೆದುಕೊಡಬೇಕಿದ್ದು, ಸದರಿ ಮುಚ್ಚಳಿಕೆ ಪತ್ರದಲ್ಲಿ ಮುಂದೆ ನ್ಯಾಯಾಲಯವು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿ, ಅವರುಗಳು 2008 ಕ್ಕೂ ಹಿಂದಿನ ಪದ್ಧತಿಯಂತೆ ಶುಲ್ಕವನ್ನು ಪಾವತಿಸುವುದಾಗಿ ಬರೆದುಕೊಡಬೇಕಿರುತ್ತದೆ.
 
ಈ ರೀತಿ ಬರೆದುಕೊಟ್ಟ ಬಿಲ್ಡರ್ ಗಳು ತಮ್ಮ ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ಗ್ರಾಹಕರಿಗೆ ವಾಣಿಜ್ಯ ಮಳಿಗೆಗಳನ್ನು ಅಥವಾ ವಸತಿ ಸಮುಚ್ಛಯಗಳನ್ನು ಮಾರಾಟ ಮಾಡಿರುತ್ತಾರಲ್ಲದೇ, ಅಂತಹ ಬಿಲ್ಡರ್ಗಳಿಂದ ಬಾಕಿ ಶುಲ್ಕವನ್ನು ಸಂಗ್ರಹಿಸುವುದು ನಿಜಕ್ಕೂ ಅಸಾಧ್ಯವಾದಂತಹ ಕೆಲಸವಾಗಿರುತ್ತದೆ.
 
ಈಗಿನ ನಕ್ಷೆ ಮಂಜೂರಾತಿ ಶುಲ್ಕದ ಶೇ. 22 ರಷ್ಟನ್ನು ಮಾತ್ರ 2008 ಕ್ಕೂ ಹಿಂದೆ ವಸೂಲಿ ಮಾಡಲಾಗುತ್ತಿತ್ತು. ಬದಲಾದ ಸನ್ನಿವೇಶಗಳಲ್ಲಿ ಮತ್ತು ಬೆಂಗಳೂರು ಮಹಾನಗರದಲ್ಲಿ 2008 ರಲ್ಲಿದ್ದ ಭೂಮಿಯ ಬೆಲೆಗೂ ಪ್ರಸ್ತುತ ಇರುವ ಭೂಮಿಯ ಬೆಲೆಗೂ ಅಜಗಜಾಂತರ ವ್ಯತ್ಯಾಸವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ನಕ್ಷೆ ಮಂಜೂರಾತಿ ಶುಲ್ಕವನ್ನೂ ಸಹ 2008-09 ರಿಂದ ಏರಿಸಲಾಗಿತ್ತು.
 
ಪ್ರಸ್ತುತ ಇರುವ ನಕ್ಷೆ ಮಂಜೂರಾತಿ ಶುಲ್ಕದ ಒಟ್ಟು ಶುಲ್ಕದ ಪೈಕಿ 2008 ಕ್ಕೂ ಹಿಂದೆ ಇದ್ದಂತಹ ಶುಲ್ಕ ವಸೂಲಾತಿ ಪದ್ಧತಿಯ ಅನ್ವಯ ಈಗಿರುವಂತಹ ನಕ್ಷೆ ಮಂಜೂರಾತಿ ಶುಲ್ಕದ ಶೇ. 22 ರಷ್ಟು ಮಾತ್ರ. ಉದಾಹರಣೆಗೆ ಪ್ರಸ್ತುತ ಯಾವುದೇ ಒಂದು ಕಟ್ಟಡದ ನಕ್ಷೆ ಮಂಜೂರಾತಿಗೆ 01 ಲಕ್ಷ ರೂಪಾಯಿ ಸಂಗ್ರಹವಾಗುತ್ತಿದ್ದರೆ, 2008 ಕ್ಕೂ ಹಿಂದಿನ ಪದ್ಧತಿಯಂತೆ ಕೇವಲ 22 ಸಾವಿರ ರೂಪಾಯಿಗಳಷ್ಟು ಮಾತ್ರ ಶುಲ್ಕವನ್ನು ವಸೂಲಿ ಮಾಡಬಹುದಾಗಿರುತ್ತದೆ.
 
- 0 - 0 - 0 -
“ಆಗ್ರಹ”
 
1) ಈ ರೀತಿ ಅವೈಜ್ಞಾನಿಕವಾದಂತಹ ಮತ್ತು ಬಿಲ್ಡರ್ ಗಳ ಪರವಾದಂತಹ ನಿರ್ಧಾರವನ್ನು ತೆಗೆದುಕೊಂಡು ಪಾಲಿಕೆಗೆ ನೂರಾರು ಕೋಟಿ ರೂಪಾಯಿಗಳ ನಕ್ಷೆ ಮಂಜೂರಾತಿ ಶುಲ್ಕದ ವಸೂಲಾತಿಗೆ ಕಡಿವಾಣ ಹಾಕಲು ಹೊರಟಿರುವ ಪಾಲಿಕೆಯ ಆರ್ಥಿಕ ಹಿತಾಸಕ್ತಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡಿರುವ ಮತ್ತು ವಿಭಾಗೀಯ ಪೀಠದಲ್ಲಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ಅಥವಾ ಅದಕ್ಕೆ ತಡೆಯಾಜ್ಞೆ ತೆಗೆದುಕೊಳ್ಳಲು ಹತ್ತಾರು ಅವಕಾಶಗಳಿದ್ದರೂ ಸಹ ಪಾಲಿಕೆಯ ಆರ್ಥಿಕ ಹಿತಾಸಕ್ತಿಯನ್ನು ಮರೆತು, ಬಿಲ್ಡರ್ ಗಳ ಪರವಾದಂತಹ ನಿಲುವನ್ನು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ತೆಗೆದುಕೊಂಡಿರುವ ಪಾಲಿಕೆಯ ಮುಖ್ಯ ಆಯುಕ್ತರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಬೇಕೆಂದು ಹಾಗೂ ಹಿರಿಯ ಅನುಭವೀ ವಕೀಲರನ್ನು ಕೂಡಲೇ ನಿಯೋಜಿಸಿ, ಉಚ್ಛ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಥವಾ ತೀರ್ಪಿಗೆ ತಡೆಯಾಜ್ಞೆ ಪಡೆದುಕೊಳ್ಳುವ ಸಂಬಂಧ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ಆಕ್ಷೇಪಣಾ ಪ್ರಕರಣವನ್ನು ದಾಖಲಿಸುವ ಬಗ್ಗೆ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು ಹಾಗೂ ಪಾಲಿಕೆಯ ಮಾನ್ಯ ಆಡಳಿತಾಧಿಕಾರಿಗಳನ್ನು ಆಗ್ರಹಿಸಲಾಗಿದೆ.
 
2) ಹಾಗೆಯೇ ಈ ಬಿಲ್ಡರ್ ಗಳ ಪರವಾದಂತಹ ಪಾಲಿಕೆ ವಿರೋಧಿ ನಿರ್ಣಯವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರನ್ನು ಆಗ್ರಹಿಸಲಾಗಿದೆ.
 
3) ನಿರಂತರವಾಗಿ ಪಾಲಿಕೆ ವಿರೋಧಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಗೌರವ್ ಗುಪ್ತಾ ರವರನ್ನು ಪಾಲಿಕೆಯ ಮುಖ್ಯ ಆಯುಕ್ತರ ಸ್ಥಾನದಿಂದ ಕೂಡಲೇ ಬದಲಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಗಿದೆ.
 
“ದೂರುಗಳು”
 
1) ಈ ಮಹಾ ವಂಚನೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ಪಾಲಿಕೆಯ ಮುಖ್ಯ ಆಯುಕ್ತರಾದ ಶ್ರೀ. ಗೌರವ್ ಗುಪ್ತಾ ರವರ ವಿರುದ್ಧ ಹಾಗೂ ಪಾಲಿಕೆಯ ನಗರ ಯೋಜನೆ ಇಲಾಖೆಯ ಜಂಟಿ ನಿರ್ದೇಶಕರು (ಉತ್ತರ) ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ. ಮಂಜೇಶ್ ರವರ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕೆಂದು ACB ಮತ್ತು BMTF ನಲ್ಲಿ ದಾಖಲೆಗಳ ಸಹಿತ ದೂರನ್ನು ಸಲ್ಲಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೆಲ್ಲಾ ಪುಕ್ಸಟೆ ಎಜುಕೇಶನ್ ಬೇಕಾ?? ಬೆಂಗಳೂರು ಡಿಸಿ ಉದಾಟತನ..!!