Select Your Language

Notifications

webdunia
webdunia
webdunia
webdunia

ಪ್ರೇಯಸಿಯನ್ನು ಕೊಂದು ಕಬ್ಬಿನ ಗದ್ದೆಗೆ ಹೂತು ಹಾಕಿದ ಪಾಗಲ್ ಪ್ರೇಮಿ!

ಪ್ರೇಯಸಿಯನ್ನು ಕೊಂದು ಕಬ್ಬಿನ ಗದ್ದೆಗೆ ಹೂತು ಹಾಕಿದ ಪಾಗಲ್ ಪ್ರೇಮಿ!
ಹಾಸನ , ಬುಧವಾರ, 14 ಡಿಸೆಂಬರ್ 2022 (13:13 IST)
ಹಾಸನ : ಪ್ರೇಯಸಿಯ ಶವವನ್ನು ಯಾರಿಗೂ ತಿಳಿಯದಂತೆ ಪ್ರೀಯಕರನೇ ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿರುವ ಘಟನೆ ಹೊಳೆನರಸೀಪುರ ತಾಲೂಕಿನ, ಪಾರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
 
ಕಾವ್ಯ (25) ಮೃತಪಟ್ಟ ಯುವತಿಯಾಗಿದ್ದು, ಆಕೆಯನ್ನು ಕೊಲೆ ಮಾಡಿ ಹೂತು ಹಾಕಿದ್ದಾನೆ ಎಂದು ಪ್ರಿಯಕರ ಅವಿನಾಶ್ ವಿರುದ್ಧ ಕಾವ್ಯ ಪೋಷಕರು ಆರೋಪಿಸಿದ್ದಾರೆ.

ಅರಕಲಗೂಡು ತಾಲೂಕಿನ, ಮುದ್ಲಾಪುರ ಗ್ರಾಮದ ಕಲ್ಪನಾ ಅವರ ಪುತ್ರಿ ಕಾವ್ಯ ಒಂದುವರೆ ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದಳು. ನಂತರ ದೊಡ್ಡಮ್ಮನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿದ್ದಳು. ಬಿಬಿಎಂ ಓದಿದ್ದ ಕಾವ್ಯ ಅಕ್ಷಯ್ನನ್ನು ಪ್ರೀತಿಸಿ ವಿವಾಹವಾಗಿದ್ದಳು.

ಈ ವಿಷಯವನ್ನು ತಾಯಿಯ ಬಳಿವೂ ಹೇಳಿರಲಿಲ್ಲ. ಮದುವೆಯಾದ ಕೆಲವೇ ತಿಂಗಳಲ್ಲಿ ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿ ಅಕ್ಷಯ್ ಜೊತೆ ವಿವಾಹ ಸಂಬಂಧ ಮುರಿದುಕೊಂಡಿದ್ದಳು. ಈ ವಿಚಾರವನ್ನು ಕೂಡ ತನ್ನ ತಾಯಿಯಿಂದ ಮುಚ್ಚಿಟ್ಟಿದ್ದಳು. ನಂತರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು.

ಬೆಂಗಳೂರಿನಲ್ಲಿ ಕೆಲ ತಿಂಗಳುಗಳ ಕಾಲ ಕೆಲಸ ಮಾಡಿದ ಕಾವ್ಯ ನಂತರ ಹಾಸನಕ್ಕೆ ವಾಪಾಸಾಗಿದ್ದಳು. ಬಳಿಕ ಹೊಳೆನರಸೀಪುರ ತಾಲೂಕಿನ, ಪಾರಸನಹಳ್ಳಿ ಗ್ರಾಮದ ಅವಿನಾಶ್ನನ್ನು ಪ್ರೀತಿಸುತ್ತಿದ್ದಳು. ಕಳೆದ 2 ವರ್ಷಗಳಿಂದ ಅವಿನಾಶ್ ಮನೆಯಲ್ಲಿಯೇ ವಾಸವಿದ್ದ ಕಾವ್ಯ ತಾಯಿಯ ಬಳಿ ಬೆಂಗಳೂರಿನಲ್ಲೇ ಇರುವುದಾಗಿ ಹೇಳಿದ್ದಳು.

ಕಾವ್ಯ ಕಳೆದ 1 ತಿಂಗಳಿನಿಂದ ತಾಯಿಗೆ ಫೋನ್ ಮಾಡದೇ ವಾಯ್ಸ್ ಮೆಸೇಜ್ ಕಳುಹಿಸುತ್ತಿದ್ದಳು. ಮೊಬೈಲ್, ಲ್ಯಾಪ್ಟ್ಯಾಪ್ ತೆಗೆದುಕೊಳ್ಳಬೇಕೆಂದು 25 ಸಾವಿರ ಹಣವನ್ನು ಹಾಕಿಸಿಕೊಂಡಿದ್ದಳು. ಕಳೆದ 20 ದಿನಗಳಿಂದ ಕಾವ್ಯ ತನ್ನ ತಾಯಿಗೆ ಫೋನ್ ಮಾಡಿರಲಿಲ್ಲ.

ಅವಳ ಫೋನ್ ಕೂಡಾ ಸ್ವಿಚ್ ಆಫ್ ಆಗಿತ್ತು. ಇದರಿಂದ ಕಾವ್ಯಳ ತಾಯಿ ಆತಂಕಗೊಂಡಿದ್ದರು. ನಂತರ ಕಲ್ಪನಾ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಫೋನ್ ಮಾಡಿ, ನಿಮ್ಮ ಮಗಳನ್ನು ಹೂತು ಹಾಕಿದ್ದಾರೆ ಎಂದು ಗ್ರಾಮದಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು.

ಇದಾದ ಬಳಿಕ ಮಗಳು ಕಾಣೆಯಾಗಿರುವ ಬಗ್ಗೆ ಕಲ್ಪನಾ ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವಿನಾಶ್ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕಾವ್ಯಳ ಶವವನ್ನು ಕಬ್ಬಿನಗದ್ದೆಯಲ್ಲಿ ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಅವಿನಾಶ್ ಹಾಗೂ ಆತನ ಪೋಷಕರೇ ನನ್ನ ಮಗಳನ್ನು ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂದು ಕಲ್ಪನಾ ಆರೋಪಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಜಪಾನ್ : ಜನನ ಪ್ರಮಾಣ ಗಣನೀಯವಾಗಿ ಇಳಿಮುಖ