ಕೋವಿಡ್ ರೂಪಾಂತರಿ ಒಮಿಕ್ರಾನ್ ಸೋಂಕಿಗೆ ತುತ್ತಾಗಿರುವವರಲ್ಲಿ ಶೇ.91ರಷ್ಟು ಜನರು ಸಂಪೂರ್ಣ ಲಸಿಕೆ ಪಡೆದಿದ್ದರು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ಭಾರತದಲ್ಲಿ ಈವರೆಗೆ ಪತ್ತೆಯಾಗಿರುವ 358 ಸೋಂಕಿತರ ಪೈಕಿ ಅದ್ಯಯನ ನಡೆಸಿದ 183 ಜನರ ಅಧ್ಯಯನದ ಫಲಿತಾಂಶ ಹಂಚಿಕೊಂಡಿದ್ದಾರೆ.
ಈ ಅಧ್ಯಯನದ ಪ್ರಕಾರ, ದೇಶದಲ್ಲಿ ಪತ್ತೆಯಾದ ಒಮಿಕ್ರಾನ್ ಸೋಂಕಿತರಲ್ಲಿ ಹೆಚ್ಚಿನವರು ವಿದೇಶದಿಂದ ಬಂದವರಾಗಿದ್ದಾರೆ. ಅದರಲ್ಲೂ ಈ 183 ಒಮಿಕ್ರಾನ್ ಸೋಂಕಿತರಲ್ಲಿ 87 ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಇಬ್ಬರು ಕೇವಲ ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಏಳು ಮಂದಿ ಲಸಿಕೆ ಪಡೆದಿರಲಿಲ್ಲ. ಇನ್ನು 16 ಜನರು ರಾಷ್ಟ್ರೀಯ ಲಸಿಕಾ ಅಭಿಯಾನದಡಿ ಲಸಿಕೆ ಪಡೆಯಲು ಅನರ್ಹರಾಗಿದ್ದಾರೆ ಎಂದು ತಿಳಿಸಿದರು.
ಈವರೆಗೆ ಪತ್ತೆಯಾದ ಸೋಂಕಿತರಲ್ಲಿ ಶೇ.70ರಷ್ಟು ಜನರಿಗೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಶೇ.30ರಷ್ಟು ಮಂದಿಗೆ ಮಾತ್ರ ಒಮಿಕ್ರಾನ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ ಎಂದರು.
ದೇಶದಲ್ಲಿ 358 ಜನರಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದ್ದು,ಇವರಲ್ಲಿ 114 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 244 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದರು.