ಹುಣಸೂರು: ನಾಡಹಬ್ಬ ದಸಾರದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಮೊದಲ ತಂಡ ಇದೀಗ ತಾಲ್ಲೂಕಿನ ನಾಗರನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ವೀರನಹೊಸಹಳ್ಳಿಯಲ್ಲಿ ಸೋಮವಾರ ಆರಂಭವಾಯಿತು.
ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಸಚಿವರಾದ ಈಶ್ವರ ಖಂಡ್ರೆ, ಕೆ.ವೆಂಕಟೇಶ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಸುಗಮವಾದ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಜಾನಪದ ಕಲಾ ತಂಡಗಳು, ಕಳಶ ಹೊತ್ತ ಮಹಿಳೆಯರು, ಹಾಡಿಯ ಜನರು ಈ ಸಾಂಪ್ರದಾಯಿಕ ಪಯಣಕ್ಕೆ ಸಾಕ್ಷಿಯಾದರು.
ಮಧ್ಯಾಹ್ನ 12.15ರಿಂದ 12.45ರ ಶುಭ ಸಮಯದಲ್ಲಿ ಅರಮನೆ ಪುರೋಹಿತ ಎಸ್.ವಿ.ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಭೀಮ, ಮಹೇಂದ್ರ, ಕಾವೇರಿ, ಕಂಜನ್, ಪ್ರಶಾಂತ, ಲಕ್ಷ್ಮಿ, ಏಕಲವ್ಯ ಆನೆಗಳು ಮೈಸೂರು ಕಡೆ ಪ್ರಯಾಣ ಬೆಳೆಸಿತು, ಪಾದ ತೊಳೆದು ಹೂ, ಅರಿಶಿನ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಯಿತು.
ಆನೆಗಳಿಗೆ ಗಂಧ, ಸುಗಂಧಭರಿತ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ, ಶೋಡಷೋಪಚಾರ ಪೂಜೆ, ಗಣಪತಿ ಅರ್ಚನೆಯೊಂದಿಗೆ ವನದೇವತೆ ಹಾಗೂ ನಾಡ ದೇವತೆ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.