Select Your Language

Notifications

webdunia
webdunia
webdunia
webdunia

ಬ್ರಿಟಿಷ್ ಕಾನೂನಿಗೆ ಮುಕ್ತಿ, ದೇಶದಲ್ಲಿ ಇಂದಿನಿಂದ ಕ್ರಿಮಿನಲ್ ಗಳಿಗೆ ಹೊಸ ಕಾನೂನು ಜಾರಿ

Crime

Krishnaveni K

ನವದೆಹಲಿ , ಸೋಮವಾರ, 1 ಜುಲೈ 2024 (09:49 IST)
ನವದೆಹಲಿ: ಬ್ರಿಟಿಷರ ಕಾಲದ ಮೂರು ಹಳೆಯ ಕಾನೂನುಗಳಿಗೆ ತಿಲಾಂಜಲಿ ಇಡಲಾಗಿದ್ದು ಇಂದಿನಿಂದ ಹೊಸ ದೇಸೀ ಕಾನೂನು ಜಾರಿಗೆ ಬರಲಿದೆ. ಇದರ ಮಹತ್ವವೇನು, ಯಾರಿಗೆ ಲಾಭ ಎಂಬ ವಿವರ ಇಲ್ಲಿದೆ ನೋಡಿ.

ನಮ್ಮ ದೇಶದಲ್ಲಿ ಈಗ ಜಾರಿಯಲ್ಲಿರುವ ಕಾನೂನುಗಳು ಬಹುತೇಕ ಬ್ರಿಟಿಷರ ಕಾಲದ್ದು. ಹೀಗಾಗಿ ಈ ಕಾನೂನನ್ನು ಪ್ರಸ್ತುತ ಕಾಲಕ್ಕೆ ಸರಿಹೊಂದುವಂತೆ ಕೇಂದ್ರ ಸರ್ಕಾರ ಹೊಸ ಕಾನೂನುಗಳನ್ನು ಜಾರಿಗೆ ತಂದಿತ್ತು. ಇದು ಇಂದಿನಿಂದ ಜಾರಿಗೆ ಬರಲಿದೆ. ಈ ಕಾನೂನು ಕ್ರಿಮಿನಲ್ ಅಪರಾಧಗಳನ್ನು ನಿಭಾಯಿಸುವಲ್ಲಿ ಮತ್ತಷ್ಟು ವೇಗ ಮತ್ತು ಪರಿಣಾಮಕಾರಿ ಎನಿಸಿಕೊಳ್ಳಲಿದೆ.

ಈ ಹಿಂದೆ ಇದ್ದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ, ಸಾಕ್ಷ್ಯ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದ್ದು, ಈಗ ಜೀರೋ ಎಫ್ ಐಆರ್, ಕಡ್ಡಾಯ ವಿಡಿಯೋ ಚಿತ್ರೀಕರಣ, ಆನ್ ಲೈನ್ ಮೂಲಕ ದೂರು ದಾಖಲಿಸಲು ಅವಕಾಶ, ಎಸ್ಎಂಎಸ್ ಮೂಲಕ ಸಮನ್ಸ್ ಕಳುಹಿಸುವ ಅವಕಾಶ ಮತ್ತು 45 ದಿನಗಳೊಳಗೆ ಶಿಕ್ಷೆ ಪ್ರಕಟಿಸಲು ಅವಕಾಶವಾಗುವಂತೆ ಕಾಯಿದೆ ರೂಪಿಸಲಾಗಿದೆ.

ಕ್ರಿಮಿನಲ್ ಅಪರಾಧಗಳ ವಿಚಾರಣೆ ಬೇಗನೇ ಮುಗಿದು ಆರೋಪಿಗಳಿಗೆ ಶೀಘ್ರ ಶಿಕ್ಷೆ ಪ್ರಕಟವಾಗಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಈ ಕಾಯ್ದೆ ರೂಪಿಸಲಾಗಿದೆ. ಈ ಮೊದಲು ಜಾರಿಯಲ್ಲಿದ್ದ ಕ್ರಿಮಿನಲ್ ಕಾನೂನುಗಳು ಬ್ರಿಟಿಷ್ ಕಾಲದವಾಗಿದ್ದವು. ಆದರೆ ಈಗ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ದೇಸೀ ಟಚ್ ನೀಡಲಾಗಿದೆ.

ಈ ಹೊಸ ಕಾನೂನು ಸಂತ್ರಸ್ತರ ಪರವಾಗಿರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 60 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಬೇಕು, 45 ದಿನಗಳಲ್ಲಿ ಶಿಕ್ಷೆ ಘೋಷಣೆಯಾಗಬೇಕು ಎಂದು ಹೊಸ ಕಾನೂನಿನಲ್ಲಿ ಹೇಳಲಾಗಿದೆ. ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡುವುದು, ಅಪ್ರಾಪ್ತರ ಮೇಲೆ ಗ್ಯಾಂಗ್ ರೇಪ್ ಪ್ರಕರಣ, ಸರಗಳ್ಳತನ, ಗುಂಪು ಹಲ್ಲೆಗಳನ್ನು ಐಪಿಸಿ ಅಪರಾಧ ಪಟ್ಟಿಯಲ್ಲಿ ಸೇರಿಸಲಾಗಿದೆ.

ಇಷ್ಟು ದಿನ ವಂಚನೆ ಪ್ರಕರಣಗಳನ್ನು ಸೆಕ್ಷನ್ 420 ಎಂದು ಗುರುತಿಸಲಾಗುತ್ತಿತ್ತು. ಇನ್ನು ಮುಂದೆ ಇದನ್ನು ಸೆಕ್ಷನ್ 318 ರ ಅಡಿ ತರಲಾಗಿದೆ. ಕೊಲೆ ಪ್ರಕರಣಗಳಿಗೆ ಇದುವರೆಗೆ ಸೆಕ್ಷನ್ 302 ಇತ್ತು, ಇನ್ನು ಮುಂದೆ ಇದು ಸೆಕ್ಷನ್ 103 ರ ಅಡಿ ಬರಲಿದೆ. ಅದೇ ರೀತಿ ಕೊಲೆ ಯತ್ನ ಪ್ರಕರಣಗಳ ಸೆಕ್ಷನ್ 307 ರ ಬದಲಾಗಿ 109 ಆಗಿದೆ. ಅತ್ಯಾಚಾರ ಪ್ರಕರಣಕ್ಕೆ ಸೆಕ್ಷನ್ 376 ರ ಬದಲಾಗಿದೆ ಸೆಕ್ಷನ್ 64 ಆಗಿದೆ.

ಅದೇ ರೀತಿ ವರದಕ್ಷಿಣೆ ಕಿರುಕುಳ 304 (ಬಿ) ಬದಲಾಗಿ 80 ಆಗಿದೆ. ರಸ್ತೆ ಅಪಘಾತ ಸೇರಿದಂತೆ ನಿರ್ಲ್ಯಕ್ಷದಿಂದ ಮರಣ ಅಪರಾಧಕ್ಕೆ ಸೆಕ್ಷನ್ 304 (ಎ) ಬದಲಾಗಿ ಸೆಕ್ಷನ್ 106 ಆಗಲಿದೆ. ವ್ಯಕ್ತಿ ಅಪಹರಣ ಪ್ರಕರಣ ಸೆಕ್ಷನ್ 359 ರ ಬದಲು ಸೆಕ್ಷನ್ 137 ಆಗಿದೆ. ಆತ್ಮಹತ್ಯೆಗೆ ಯತ್ನಿಸಿದರೆ ಸೆಕ್ಷನ್ 309 ರ ಬದಲು ಸೆಕ್ಷನ್ 226 ಆಗಲಿದೆ.

ಈ ಹೊಸ ಕಾಯಿದೆಗಳ ಬಗ್ಗೆ ಮಾಹಿತಿ ಪಡೆಯಲು ಪೊಲೀಸರಿಗೆ ರಾಜ್ಯ ಪೊಲೀಸ್ ಇಲಾಖೆಯಿಂದ ಕೈ ಪಿಡಿ ನೀಡಲಾಗಿದೆ. ಇನ್ನು ಮುಂದೆ ದಾಖಲಾಗುವ ಹೊಸ ಪ್ರಕರಣಗಳು ಈ ಹೊಸ ಕಾಯಿದೆಯನ್ವಯ ದಾಖಲಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ ಎಂದಾ ಸಾಹಿತಿ ಕುಂ.ವೀರಭದ್ರಪ್ಪ