ಗಾರೆ ಕೆಲಸ ಮಾಡಿಕೊಂಡು ಓದುತ್ತಿದ್ದ ವಿದ್ಯಾರ್ಥಿ ಪಿ. ಮಹದೇವಸ್ವಾಮಿ ಎಂಬವರಿಗೆ 14 ಚಿನ್ನದ ಪದಕ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗೆ 14 ಚಿನ್ನದ ಪದಕ ಲಭ್ಯವಾಗಿದೆ. 14 ಚಿನ್ನದ ಪದಕಗಳ ಜೊತೆಗೆ 3 ನಗದು ಬಹುಮಾನವನ್ನು ವಿದ್ಯಾರ್ಥಿ ಪಡೆದುಕೊಂಡಿದ್ದಾರೆ. ಪುಟ್ಟಬಸವಯ್ಯ, ನಾಗಮ್ಮ ದಂಪತಿ ಪುತ್ರ ಮಹದೇವ, ಚಾಮರಾಜನಗರ ಜಿಲ್ಲೆಯ ನಾಗವಳ್ಳಿಯ ವಿದ್ಯಾರ್ಥಿ ಎಂಎ ಕನ್ನಡದಲ್ಲಿ ಸಾಧನೆ ಮಾಡಿದ್ದಾರೆ.
20 ವರ್ಷದ ಹಿಂದೆ ತಂದೆ ಪುಟ್ಟ ಬಸವಯ್ಯ ನಿಧನ ಹೊಂದಿದ್ದರು. ಅಮ್ಮ ಕೂಲಿ ಕೆಲಸ ಮಾಡಿ ಮಗನಿಗೆ ಶಿಕ್ಷಣ ನೀಡಿದ್ದಾರೆ. ಅಮ್ಮ ಅಕ್ಕ ಅಣ್ಣನ ಸಹಕಾರದಿಂದ ವಿದ್ಯಾಭ್ಯಾಸ ಮಾಡಿರುವ ಅವರು ಗಾರೆ ಕೆಲಸ, ಬಣ್ಣ ಬಳಿಯುವ ಕೆಲಸ ಸೇರಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು. ಸಾಹಿತ್ಯದಲ್ಲಿ ಪಿಎಚ್‌ಡಿ ಮಾಡಬೇಕು, ಐಎಎಸ್ ಹಾಗೂ ಕೆಎಎಸ್ ಮಾಡಬೇಕೆಂಬ ಕನಸು ಇರುವುದಾಗಿ ತಿಳಿಸಿದ್ದಾರೆ. ಡಾ.ಬಿ.ಆರ್ ಅಂಬೇಡ್ಕರ್ ಸ್ಪೂರ್ತಿಯಿಂದ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಮೈಸೂರು ವಿವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಒಬ್ಬರಿಗೆ 19 ಚಿನ್ನದ ಪದಕ 2 ನಗದು ಬಹುಮಾನ ಲಭಿಸಿದೆ. ಕೆಮಿಸ್ಟ್ರಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಭಾವನ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಮಹದೇವ ಭಾಗ್ಯ ದಂಪತಿ ಪುತ್ರಿ ಮೈಸೂರಿನ ರಾಜರಾಜೇಶ್ವರಿ ನಗರದ ನಿವಾಸಿ ಆಗಿದ್ದಾರೆ.
ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ಹೆಸರಲ್ಲಿ ಪದಕ
ಮುಂದಿನ ವರ್ಷದಿಂದ ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ಹೆಸರಲ್ಲಿ ಬಂಗಾರದ ಪದಕ ಪ್ರದಾನ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಮೈಸೂರಿನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಘೋಷಣೆ ಮಾಡಿದ್ದಾರೆ. ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವಿಭಾಗಕ್ಕೆ ಪಾರ್ವತಮ್ಮ ಪದಕ, ಲಲಿತ ಕಲೆ ವಿಭಾಗಕ್ಕೆ ಪುನೀತ್ ಹೆಸರಿನಲ್ಲಿ ಪದಕ ಪ್ರದಾನ ಮಾಡಲಾಗುವುದು. ಮುಂದಿನ ವರ್ಷದಿಂದ ಪದಕ ಪ್ರದಾನ ಮಾಡಲಾಗುವುದು ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ತಿಳಿಸಿದ್ದಾರೆ.