ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಮೂವಿ ಸಿನಿಮಾದ ಪ್ರಮುಖ ದೃಶ್ಯವೇ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ಚಿತ್ರತಂಡಕ್ಕೆ ಹೊಸ ತಲೆಬಿಸಿ ಶುರುವಾಗಿದೆ.
ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದುವರೆಗೆ ಟೈಟಲ್ ರಿವೀಲ್ ಮಾಡಿದ್ದು ಬಿಟ್ಟರೆ ಚಿತ್ರದ ಯಾವುದೇ ಅಪ್ ಡೇಟ್ ಕೂಡಾ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ ಜನವರಿ 8 ರಂದು ಯಶ್ ಹುಟ್ಟುಹಬ್ಬವಿದ್ದು ಟಾಕ್ಸಿಕ್ ಸಿನಿಮಾ ಬಗ್ಗೆ ಪೋಸ್ಟರ್, ಟೀಸರ್ ಏನಾದರೂ ಬರಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಈ ನಡುವೆ ಯಾರೋ ಚಿತ್ರದ ಪ್ರಮುಖ ಸನ್ನಿವೇಶವೊಂದರ ಶೂಟಿಂಗ್ ನ್ನೇ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದು ಚಿತ್ರತಂಡಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ವಿಡಿಯೋ ಮಾಡಿರುವುದನ್ನು ನೋಡಿದರೆ ಯಾರೋ ಚಿತ್ರತಂಡದವರೇ ಮಾಡಿರಬಹುದು ಎಂಬ ಅನುಮಾನವಿದೆ.
ಇತ್ತೀಚೆಗಿನ ದಿನಗಳಲ್ಲಿ ಕೆಲವು ಪ್ರಮುಖ ಸಿನಿಮಾಗಳಿಗೆ ಶೂಟಿಂಗ್ ದೃಶ್ಯಗಳು ಲೀಕ್ ಆಗುವುದೇ ಸಮಸ್ಯೆಯಾಗುತ್ತಿದೆ. ಇದೇ ಕಾರಣಕ್ಕೆ ಕೆಲವು ಚಿತ್ರತಂಡಗಳು ಶೂಟಿಂಗ್ ಸೆಟ್ ನಲ್ಲಿ ಮೊಬೈಲ್ ನಿಷೇಧಿಸುತ್ತಾರೆ. ಆದರೆ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಸನ್ನಿವೇಶವನ್ನು ಯಾರೋ ಕದ್ದುಮುಚ್ಚಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ.