Select Your Language

Notifications

webdunia
webdunia
webdunia
webdunia

ಮಹಿಳೆಯರೇ ಏಕೆ ಆಪಾದನೆಯನ್ನು ಹೊತ್ತುಕೊಳ್ಳಬೇಕು?

ಮಹಿಳೆಯರೇ ಏಕೆ ಆಪಾದನೆಯನ್ನು ಹೊತ್ತುಕೊಳ್ಳಬೇಕು?
ಬೆಂಗಳೂರು , ಶುಕ್ರವಾರ, 27 ಆಗಸ್ಟ್ 2021 (16:15 IST)
ಸ್ಯಾಂಡಲ್ವುಡ್ನಲ್ಲಿ ಟಾಪ್ ನಟಿಯಾಗಿ ಮೆರೆದ ಗೋಲ್ಡನ್ ಕ್ವೀನ್ ರಮ್ಯಾ ಇದೀಗ ಚಿತ್ರರಂಗ ಹಾಗೂ ರಾಜಕೀಯ.. ಎರಡರಿಂದಲೂ ದೂರ ಸರಿದಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗುವ ರಮ್ಯಾ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಈ ಬಾರಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮಹಿಳೆಯರ ಪರವಾಗಿ ದನಿಯೆತ್ತಿದ್ದಾರೆ. ಪ್ರತಿ ಬಾರಿ ಮಹಿಳೆಯರೇ ಏಕೆ ಆಪಾದನೆಯನ್ನು ಹೊತ್ತುಕೊಳ್ಳಬೇಕು? ಮಹಿಳೆಯರೇ ಯಾಕೆ ಎಲ್ಲಾದರಲ್ಲೂ ಕಾಂಪ್ರೊಮೈಸ್ ಆಗಬೇಕು? ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದಾರೆ.
ನಟಿ ರಮ್ಯಾ ಫೇಸ್ಬುಕ್ ಪೋಸ್ಟ್
''ಮಹಿಳೆಯರ ಮೇಲೆ ಪುರುಷರಿಂದಾಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರವಾಗಲಿ ಅಥವಾ ದೈಹಿಕ ಅಥವಾ ಮಾನಸಿಕ ದೌರ್ಜನ್ಯವೇ ಆಗಲಿ.. ಮಹಿಳೆಯರಾದ ನಾವೇ ದೂಷಣೆಗೆ ಒಳಗಾಗುತ್ತೇವೆ. ಇದು ನಿನ್ನದೇ ತಪ್ಪು, ನೀನು ಹಾಗೆ ಹೇಳಬಾರದಿತ್ತು, ನೀನು ಹಾಗೆ ಮಾಡಬಾರದಿತ್ತು, ನೀನು ಅದನ್ನ ಧರಿಸಬಾರದಿತ್ತು, ನಿನ್ನ ಉಡುಪು ತೀರಾ ಬಿಗಿಯಾಗಿದೆ ಮತ್ತು ತೀರಾ ಚಿಕ್ಕದಾಗಿದೆ, ತೀರಾ ತಡವಾಗಿ ನೀನು ಮನೆಯಿಂದ ಹೊರಗೆ ಹೋಗಬಾರದಿತ್ತು, ನೀನು ಮೇಕಪ್ ಧರಿಸಬಾರದಿತ್ತು, ಕೆಂಪು ಲಿಪ್ ಸ್ಕಿಕ್ ಯಾಕೆ ಹಾಕೊಂಡಿದ್ದೆ - ಇದನ್ನೆಲ್ಲ ನಾವು ಆಗಾಗ ಕೇಳುತ್ತಲೇ ಇರುತ್ತೇವೆ! ಯಾಕೆ?''
''ಯಾಕಂದ್ರೆ, ಪುರುಷರು ಪುರುಷರಾಗಿಯೇ ಇರುತ್ತಾರೆ. ನಾವು ಮಾತ್ರ ಬದಲಾಗಬೇಕು. ನಾವು ಮಾತ್ರ ಕಾಂಪ್ರೊಮೈಸ್ ಆಗಬೇಕು. ನಾವು ಮಾತ್ರ ಅಡ್ಜಸ್ಟ್ ಮಾಡಿಕೊಳ್ಳಬೇಕು. ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕು. ಇಲ್ಲ..! ಇನ್ನಾಗಲ್ಲ..! ಈ ನಾನ್ ಸೆನ್ಸ್ಗೆ ಈ ಕೂಡಲೆ ಪೂರ್ಣವಿರಾಮ ಇಡಿ! ನಿಜ ಹೇಳಬೇಕು ಅಂದ್ರೆ, ನಾನು ಇದನ್ನು ಮಾಡಿದ್ದೇನೆ. ನನ್ನ ಸ್ನೇಹಿತರೂ ಕೂಡ. ಆಪಾದನೆಯನ್ನು ಹೊತ್ತುಕೊಂಡಿದ್ದೇವೆ. ಆದರೆ ಏನ್ಗೊತ್ತಾ? ಇನ್ಮುಂದೆ ಇದನ್ನೆಲ್ಲಾ ಸಹಿಸಲು ಸಾಧ್ಯವಿಲ್ಲ. ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕುರುಡರಾಗಿರಬೇಡಿ. ಧ್ವನಿಯೆತ್ತಿ...'' ಎಂದು ಫೇಸ್ಬುಕ್ನಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದಾರೆ.
ವೈರಲ್ ಆಗಿದೆ ರಮ್ಯಾ ಪೋಸ್ಟ್
ನಟಿ ರಮ್ಯಾ ಮಾಡಿರುವ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ರಮ್ಯಾ ಅವರ ಪೋಸ್ಟ್ಗೆ ತರಹೇವಾರಿ ಕಾಮೆಂಟ್ಸ್ ಲಭ್ಯವಾಗಿದೆ. ಅನೇಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ರಮ್ಯಾ ಅವರ ಪೋಸ್ಟ್ನಲ್ಲಿ ವ್ಯಕ್ತಪಡಿಸಿದ್ದಾರೆ.
''ಅತ್ಯಾಚಾರದಂತಹ ಅಪರಾಧಗಳನ್ನು ತಡೆಯಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು'', ''ಮಹಿಳೆಯರ ಪರವಾಗಿ ಕಾನೂನಿದ್ದರೂ, ಅತ್ಯಾಚಾರ ಪ್ರಕರಣಗಳು ಜರುಗುತ್ತಿರುವುದು ದುರಾದೃಷ್ಟಕರ'', ''ರಮ್ಯಾ ಅವರು ಹೇಳಿರುವುದು 100% ನಿಜ. ನನಗೆ ಇಂತಹ ಪರಿಸ್ಥಿತಿ ಎದುರಾಗಿದೆ. ಈ ಡ್ರೆಸ್ ಹಾಕಿಕೊಳ್ಳಬೇಡ, ಅದು ಬೇಡ, ಇದು ಬೇಡ ಎನ್ನುತ್ತಿದ್ದರು. ಏನೇ ಆದರೂ ನಾವು ತಾಳ್ಮೆಯಿಂದ ಇರಬೇಕು. ಇದರಿಂದ ನನಗೆ ಬೇಸೆತ್ತಿದೆ'', ''ರಮ್ಯಾ ಹೇಳಿರುವುದು ಸತ್ಯ. ಇದು ಯಾವತ್ತಿದ್ದರೂ ಪುರುಷ ಪ್ರಧಾನ ಸಮಾಜ. ಪುರುಷರು ಏನು ಬೇಕಾದರೂ ಮಾಡಬಹುದು. ಆದರೆ, ಎಲ್ಲದಕ್ಕೂ ಮಹಿಳೆಯರೇ ಹೊಣೆ'' ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ''ಮಹಿಳೆಯರು ಹಾಗೂ ಪುರುಷರಿಗೆ ಸಮಾನ ಹಕ್ಕಿದೆ. ನೀವು ಪುರಾತನ ಕಾಲದ ಬಗ್ಗೆ ಮಾತನಾಡುತ್ತಿದ್ದೀರಾ'' ಎಂದಿದ್ದಾರೆ. ಅಭಿಮಾನಿಗಳು ಮಾತ್ರ ''ನೀವು ಮತ್ತೆ ಚಿತ್ರರಂಗ ಹಾಗೂ ರಾಜಕೀಯಕ್ಕೆ ಬನ್ನಿ'' ಎಂದು ಮನವಿ ಮಾಡುತ್ತಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಭಜರಂಗಿ 2 ಟ್ರೈಲರ್ ದರ್ಶನಕ್ಕೆ ರೆಡಿಯಾಗಿ