ಉಡುಪಿ: ಕಾಂತಾರ ಅಧ್ಯಾಯ 1 ರ ಮುಹೂರ್ತ, ಫಸ್ಟ್ ಲುಕ್ ಟೀಸರ್ ಇಂದು ಬಿಡುಗಡೆಯಾಗಿದೆ. ಇದರ ನಡುವೆಯೇ ರಿಷಬ್ ಶೆಟ್ಟಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಉಡುಪಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ಪೂಜೆ ನೆರವೇರಿದೆ. ಈ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ದಂಪತಿ, ನಿರ್ಮಾಪಕ ವಿಜಯ್ ಕಿರಗಂದೂರು, ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು ಸೇರಿದಂತೆ ಹಲವರು ಆಗಮಿಸಿದ್ದರು.
ಮುಹೂರ್ತದ ಬಳಿಕ ಮಾಧ‍್ಯಮಗಳೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ ಕಾಂತಾರ 2 ಪಾತ್ರವರ್ಗದ ಬಗ್ಗೆ ಪ್ರಶ್ನೆ ಮಾಡಲಾಯಿತು. ಈ ಸಿನಿಮಾದಲ್ಲಿ ಯಾರೆಲ್ಲಾ ಆಕ್ಟ್ ಮಾಡಲಿದ್ದಾರೆ, ಹೀರೋಯಿನ್ ಯಾರು ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ರಿಷಬ್, ಸದ್ಯಕ್ಕೆ ನನ್ನನ್ನು ಮಾತ್ರ ಹಾಕಿಕೊಂಡಿದ್ದೇನೆ. ಉಳಿದ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆಯಷ್ಟೇ. ಈ ಬಾರಿಯೂ ಕನ್ನಡದವರಿಗೇ ಮೊದಲ ಪ್ರಾಶಸ್ತ್ಯ. ರಂಗಭೂಮಿ ಹಿನ್ನಲೆಯುಳ್ಳ ಹಲವು ಕಲಾವಿದರಿಗಾಗಿ ಹುಡುಕಾಟ ನಡೆಸಲಾಗಿದೆ ಎಂದಿದ್ದಾರೆ. ಆದರೆ ಟೆಕ್ನಿಕಲ್ ಟೀಂ ಮಾತ್ರ ಕಾಂತಾರ ಮೊದಲ ಸಿನಿಮಾದಲ್ಲಿ ಕೆಲಸ ಮಾಡಿದ ತಂಡವೇ ಇರಲಿದೆ. ಅಜನೀಶ್ ಸಂಗೀತ ನೀಡುತ್ತಿದ್ದಾರೆ ಎಂದರು.
ಇನ್ನು, ರಿಷಬ್ ಶೆಟ್ಟಿ ಪ್ರಗತಿ ಶೆಟ್ಟಿ ಕೂಡಾ ಮಾತನಾಡಿದ್ದು, ನಿಮ್ಮ ಪಾತ್ರ ಈ ಭಾಗದಲ್ಲಿ ಇದೆಯಾ ಎಂದು ಕೇಳಲಾಯಿತು. ಸದ್ಯಕ್ಕೆ ಮೊದಲ ಸಿನಿಮಾದಲ್ಲಿದ್ದಂತೇ ಇಲ್ಲೂ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದೇನೆ. ಪಾತ್ರ ಇದೆಯಾ ಅಂತ ನನಗೆ ಗೊತ್ತಿಲ್ಲ. ಸದ್ಯಕ್ಕಂತೂ ಇಲ್ಲ. ಮತ್ತೆ ರಿಷಬ್ ಹೇಳುವ ಹಾಗೆ ಎಲ್ಲವೂ ನಡೆಯಲಿದೆ ಎಂದಿದ್ದಾರೆ.