ಉಡುಪಿ: ಬಹುನಿರೀಕ್ಷಿತ ಸಿನಿಮಾ ಕಾಂತಾರ ಅಧ್ಯಾಯ 1 ರ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಆದರೆ ಮುಹೂರ್ತ ಕಾರ್ಯಕ್ರಮ ನಡೆದ ಜಾಗದ ವಿಶೇಷತೆ ಏನು ಗೊತ್ತಾ?
ಎರಡು ವರ್ಷದ ಹಿಂದೆ ಕಾಂತಾರ ಸಿನಿಮಾದ ಮುಹೂರ್ತ ನಡೆದಾಗ ಯಾರಿಗೂ ಇದು ಇಷ್ಟು ದೊಡ್ಡ ಮಟ್ಟದ ಯಶಸ್ಸು ನೀಡುತ್ತದೆ ಎಂದು ಗೊತ್ತಿರಲಿಲ್ಲ. ಕೊರೋನಾ ಹಾವಳಿ ನಡುವೆ ರಿಷಬ್ ಶೆಟ್ಟಿ ಮತ್ತು ತಂಡ ತಮ್ಮ ತವರು ಉಡುಪಿ-ಕುಂದಾಪುರದಲ್ಲಿಯೇ ಚಿತ್ರೀಕರಣ ಮುಗಿಸಿದ್ದರು.
ಆದರೆ ಅಂದು ಕಾಂತಾರ ಸಿನಿಮಾದ ಮುಹೂರ್ತ ಇಷ್ಟು ದೊಡ್ಡ ಸುದ್ದಿಯಾಗಿರಲಿಲ್ಲ. ಅಂದು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್ ತಂಡ ಆನೆಗುಡ್ಡೆ ವಿನಾಯಕನ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಪೂಜೆ ನೆರವೇರಿಸಿತ್ತು. ಆಗ ಅದಕ್ಕೆ ಹೆಚ್ಚು ಪ್ರಚಾರವೂ ಇರಲಿಲ್ಲ.
ಹಾಗಂತ ರಿಷಬ್ ತಮಗೆ ಯಶಸ್ಸು ಸಿಕ್ಕಿದ ದೇವಸ್ಥಾನವನ್ನು ಮರೆತಿಲ್ಲ. ಈ ಬಾರಿ ಕಾಂತಾರದ ಮತ್ತೊಂದು ಭಾಗದ ಸಿನಿಮಾದ ಮುಹೂರ್ತವನ್ನೂ ಅದೇ ವಿನಾಯಕನ ಸನ್ನಿಧಾನದಲ್ಲಿ ರಿಷಬ್ ಮತ್ತು ತಂಡ ನೆರವೇರಿಸಿದೆ. ಕಾಂತಾರ ಭರ್ಜರಿ ಯಶಸ್ವಿಯಾಗಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಿರುವುದರಿಂದ ಈ ಬಾರಿಯ ಮುಹೂರ್ತ ಕಾರ್ಯಕ್ರಮಕ್ಕೆ ಭಾರೀ ಪ್ರಚಾರ ಸಿಕ್ಕಿದೆ. ಅಷ್ಟೇ ಅಲ್ಲ, ಇದೇ ಜಾಗದಲ್ಲಿ ರಿಷಬ್ ಮೊದಲ ಬಾರಿಗೆ ಪತ್ನಿ ಪ್ರಗತಿ ಶೆಟ್ಟಿಯನ್ನು ನೋಡಿದ್ದು ಎಂದು ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ರಿಷಬ್ ಗೂ ಈ ದೇವಾಲಯ ಸ್ಪೆಷಲ್.