ಹೈದರಾಬಾದ್: ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ನಟ ಅಲ್ಲು ಅರ್ಜುನ್ ರನ್ನು ಒಂದೇ ದಿನದಲ್ಲಿ ರಿಲೀಸ್ ಮಾಡಿಸಿದ ಲಾಯರ್ ನಿರಂಜನ್ ರೆಡ್ಡಿ ಯಾರು, ಅವರ ಫೀಸ್ ಎಷ್ಟು ಎಂದು ಇಲ್ಲಿದೆ ವಿವರ.
ನಿರಂಜನ್ ರೆಡ್ಡಿ ಆಂಧ್ರದ ಖ್ಯಾತ ಲಾಯರ್. ಅವರು ಹ್ಯಾಂಡಲ್ ಮಾಡುವುದೆಲ್ಲವೂ ವಿಐಪಿಗಳ ಕೇಸ್ ಗಳನ್ನೇ. ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯವರಿಗೆ ಸಂಬಂಧಿಸಿದ ಎಲ್ಲಾ ಕೇಸ್ ಗಳನ್ನೂ ಅವರು ನಿಭಾಯಿಸುತ್ತಿದ್ದಾರೆ. ಅವರು ಕೇಸ್ ಗೆ ಕೈ ಹಾಕಿದರೆ ಅಷ್ಟು ಬೇಗ ಸೋಲಲು ಬಿಡಲ್ಲ ಎಂದೇ ಖ್ಯಾತಿ ಹೊಂದಿದ್ದಾರೆ.
54 ವರ್ಷದ ನಿರಂಜನ್ ರೆಡ್ಡಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದವರು. 2022 ರಿಂದ ರಾಜ್ಯಸಭಾ ಸದಸ್ಯರೂ ಹೌದು. ರಾಜಕೀಯ, ವಕೀಲಿ ವೃತ್ತಿ ಅಲ್ಲದೆ, ಸಿನಿಮಾ ನಿರ್ಮಾಪಕನಾಗಿಯೂ ನಿರಂಜನ್ ರೆಡ್ಡಿ ಖ್ಯಾತರಾಗಿದ್ದಾರೆ. ಈ ಮೊದಲು ಆಚಾರ್ಯ ಸಿನಿಮಾಗೆ ಬಂಡವಾಳ ಹೂಡಿದ್ದರು. ಗಗನಮ್, ಕ್ಷಣಮ್, ಗಾಝಿ, ಆಚಾರ್ಯ ಸೇರಿದಂತೆ ನಾಲ್ಕು ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದರು.
ನಿರಂಜನ್ ರೆಡ್ಡಿ ವಕೀಲಿ ವೃತ್ತಿಯಲ್ಲೂ ಎತ್ತಿದ ಕೈ. ಅವರು ಒಮ್ಮೆ ಕೋರ್ಟ್ ಗೆ ಬರಲು 5 ರಿಂದ 10 ಲಕ್ಷ ರೂ. ಫೀಸ್ ಚಾರ್ಜ್ ಮಾಡುತ್ತಾರಂತೆ. ಆದರೆ ತಾವು ಕೈ ಹಾಕಿದ ಕೇಸ್ ನಲ್ಲಿ ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುತ್ತಾರೆ ಎಂಬ ಖ್ಯಾತಿಯಿದೆ. ಈ ಕಾರಣಕ್ಕೇ ದೊಡ್ಡ ಕುಳಗಳಿಗೇ ಅವರು ಲಾಯರ್ ಆಗಿದ್ದಾರೆ. ಈಗ ಅಲ್ಲು ಅರ್ಜುನ್ ನರನ್ನೂ ರಿಲೀಸ್ ಮಾಡಿಸಿದ ಖ್ಯಾತಿ ಅವರದ್ದು. ನಿನ್ನೆ ಕೋರ್ಟ್ ನಲ್ಲಿ ನ್ಯಾಯಾಧೀಶರು ಅಲ್ಲು ಅರ್ಜುನ್ ರನ್ನು ಆರೋಪಿ ಎಂದಾಗ ನಿರಂಜನ್ ಆರೋಪಿ ಅಲ್ಲ ಅವರು ನಟ, ಪೊಲೀಸರು ಅವರನ್ನು ಆರೋಪಿ ಮಾಡಿದ್ದಾರಷ್ಟೇ ಎಂದು ಉತ್ತರ ಕೊಟ್ಟಿರುವುದು ವೈರಲ್ ಆಗಿದೆ.