ಬೆಂಗಳೂರು: ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್ ಕಾರ್ಯಕ್ರಮ ಈ ಹಿಂದೆ ಭರ್ಜರಿ ಹಿಟ್ ಆಗಿತ್ತು. ಬಹಳ ದಿನಗಳ ಗ್ಯಾಪ್ ನಂತರ ಈ ಶೋ ಈಗ ಮತ್ತೆ ಪ್ರಸಾರವಾಗಲಿದೆ. ಈ ಬಗ್ಗೆ ಪ್ರೋಮೋ ಕೂಡಾ ಹರಿಯಬಿಡಲಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಯಶಸ್ವೀ ಕಾರ್ಯಕ್ರಮವಾಗಿತ್ತು. ಸೃಜನ್ ಮತ್ತು ಬಳಗದ ಹಾಸ್ಯದ ಜೊತೆಗೆ ಕೆಲವು ವಿಶೇಷ ಅತಿಥಿಗಳ ಜೊತೆ ಮಾಡುತ್ತಿದ್ದ ಮಜ ಮಜವಾದ ಮಾತುಗಳು ಪ್ರೇಕ್ಷಕರನ್ನು ಕೆಲವು ಕ್ಷಣ ಎಲ್ಲಾ ಟೆನ್ಷನ್ ಮರೆಯುವಂತೆ ಮಾಡುತ್ತಿತ್ತು.
ಈ ಕಾರ್ಯಕ್ರಮದಲ್ಲಿ ಈ ಹಿಂದೆ ಸೃಜನ್ ಜೊತೆಗೆ ನಿರೂಪಕಿ, ದಿವಂಗತ ಅಪರ್ಣ, ಶ್ವೇತಾ ಚಂಗಪ್ಪ, ಕುರಿ ಪ್ರತಾಪ್ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಅಪರ್ಣ ತೀರಿಕೊಂಡಿದ್ದಾರೆ. ಈ ಬಾರಿ ಅವರ ಜಾಗಕ್ಕೆ ಯಾರು ಬರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.
ಇನ್ನು ಕೆಲವರು ಬಿಗ್ ಬಾಸ್ ನಲ್ಲಿ ಈಗ ಮಿಂಚುತ್ತಿರುವ ಚೈತ್ರಾ ಕುಂದಾಪುರ ಬರಲಿ ಎನ್ನುತ್ತಿದ್ದಾರೆ. ಆಕೆ ಚೆನ್ನಾಗಿ ಮಾತನಾಡುತ್ತಾರೆ. ಆಕೆಯನ್ನು ಕರೆತನ್ನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಬಂದಿವೆ. ಇನ್ನು ಇತ್ತೀಚೆಗೆ ಸ್ತ್ರೀ ಪಾತ್ರದಲ್ಲಿ ಸದ್ದು ಮಾಡುತ್ತಿರುವ ರಾಘವೇಂದ್ರ ಕೂಡಾ ಶೋ ಭಾಗವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಕೆಲವರು ಹಿರಿಯ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದರೆ ದಯವಿಟ್ಟು ಅವರನ್ನು ಜೋಕರ್ ಗಳಂತ ತೋರಿಸಬೇಡಿ ಎಂದು ಮನವಿ ಮಾಡಿದ್ದಾರೆ.