Publish Date: Thu, 30 Apr 2020 (09:43 IST)
Updated Date: Thu, 30 Apr 2020 (09:44 IST)
ಬೆಂಗಳೂರು: ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ ಪ್ರತಿಭಾವಂತ ನಟ ಇರ್ಫಾನ್ ಖಾನ್ ಗೆ ಸೆಲೆಬ್ರಿಟಿಗಳು ಅಶ್ರುತರ್ಪಣ ಗೈದಿದ್ದಾರೆ. ಅವರ ಜತೆಗೆ ಕಳೆದ ನೆನಪುಗಳನ್ನು ಹಲವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಇವರಲ್ಲಿ ಸ್ಯಾಂಡಲ್ ವುಡ್ ನಟ ಜೆಕೆ ಕೂಡಾ ಒಬ್ಬರು. ಎಲ್ಲರಿಗೂ ಗೊತ್ತಿರುವ ಹಾಗೆ ಜೆಕೆ ಹಿಂದಿಯಲ್ಲೂ ನಟಿಸಿ ಬಂದವರು. ಹಿಂದಿ ಕಿರುತೆರೆ ವಾಹಿನಿಯ ‘ಸಿಯಾ ಕೆ ರಾಮ್’ ಧಾರವಾಹಿಯಲ್ಲಿ ರಾವಣನ ಪಾತ್ರ ಮಾಡಿ ಮಿಂಚಿದ್ದರು.
ಈ ಧಾರವಾಹಿ ಶೂಟಿಂಗ್ ಸಂದರ್ಭದಲ್ಲಿ ತಮಗೆ ಇರ್ಫಾನ್ ಖಾನ್ ರನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದಾಗ ಅವರು ತಮ್ಮ ಬಗ್ಗೆ ಹೇಳಿದ ಮೆಚ್ಚುಗೆ ಮಾತುಗಳನ್ನು ಜೆಕೆ ಈಗ ನೋವಿನಿಂದಲೇ ಹಂಚಿಕೊಂಡಿದ್ದಾರೆ. 2016 ರಲ್ಲಿ ಸಿಯಾ ಕೆ ರಾಮ್ ಧಾರವಾಹಿ ಶೂಟಿಂಗ್ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದಾಗ ಇರ್ಫಾನ್ ಖಾನ್ ರನ್ನು ಭೇಟಿಯಾಗಿದ್ದೆ. ಆಗ ನಾನು ಸಿಯಾ ಕೆ ರಾಮ್ ನಲ್ಲಿ ರಾವಣನ ಪಾತ್ರ ಮಾಡುತ್ತಿದ್ದೇನೆ ಎಂದಿದ್ದೆ. ಅದಕ್ಕವರು ನನ್ನ ಭುಜ ತಟ್ಟಿ ನಿನಗೆ ರಾಮನ ಪಾತ್ರ ಕೊಡಬೇಕಿತ್ತು ಎಂದಿದ್ದರು. ಅದು ನನಗೆ ಅತ್ಯಂತ ಖುಷಿಕೊಟ್ಟಿತ್ತು. ಅವರೊಬ್ಬ ಲೆಜೆಂಡ್. ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದಿದ್ದಾರೆ.