Publish Date: Mon, 01 Feb 2021 (09:02 IST)
Updated Date: Mon, 01 Feb 2021 (09:04 IST)
ದುಬೈ: ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷವಾದ ಗಳಿಗೆಯನ್ನು ವಿಕ್ರಾಂತ್ ರೋಣ ತಂಡ ಅಪರೂಪವಾಗಿಸಿದೆ. ದುಬೈ ಅತ್ಯಂತೆ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಸುದೀಪ್ ರ ವಿಕ್ರಾಂತ್ ರೋಣ ಲುಕ್ ಅನಾವರಣಗೊಂಡಿದೆ.
ನಿನ್ನೆ ರಾತ್ರಿ 9.30 ಕ್ಕೆ ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣನ ಟೈಟಲ್ ಲೋಗೋ ಲಾಂಚ್ ಆಗಿದೆ. ಇಡೀ ಕಟ್ಟಡವೇ ಆರಂಭದಲ್ಲಿ ಕನ್ನಡ ಬಾವುಟದ ಬಣ್ಣದಿಂದ ಮಿಂಚಿದರೆ ಬಳಿಕ ಕಿಚ್ಚ ಸುದೀಪ್ 25 ನೇ ವರ್ಷಕ್ಕೆ ಅಭಿನಂದನೆ ಸಲ್ಲಿಸಿತು. ಬಳಿಕ ವಿಕ್ರಾಂತ್ ರೋಣನ ಲುಕ್ ಅನಾವರಣಗೊಂಡಿತು. ಈ ವಿದ್ಯಮಾನವನ್ನು ಕಿಚ್ಚ ಸುದೀಪ್, ನಿರ್ದೇಶಕ ಅನೂಪ್ ಭಂಡಾರಿ ಸೇರಿದಂತೆ ಚಿತ್ರತಂಡ ಪ್ರತ್ಯಕ್ಷವಾಗಿ ಕಣ್ತುಂಬಿಕೊಂಡಿತು. ಈ ಸಂದರ್ಭದಲ್ಲಿ ಕಿಚ್ಚನ ನೋಡಲು ಅಲ್ಲಿ ನೂರಾರು ಜನರು ನೆರೆದಿದ್ದರು. ಬಣ್ಣದ ಬೆಳಕಿನಲ್ಲಿ ಇಡೀ ಬುರ್ಜ್ ಖಲೀಫಾ ಕಟ್ಟಡವೇ ಕಿಚ್ಚನ ರೂಪ ಆವರಿಸಿಕೊಂಡ ರೋಮಾಂಚಕಾರಿ ಗಳಿಗೆಯನ್ನು ಸಾವಿರಾರು ಮಂದಿ ಯೂ ಟ್ಯೂಬ್ ಮುಖಾಂತರವೂ ಕಣ್ತುಂಬಿಕೊಂಡರು.