Publish Date: Mon, 24 Jun 2024 (12:39 IST)
Updated Date: Mon, 24 Jun 2024 (12:42 IST)
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ಪತಿ ದರ್ಶನ್ ರನ್ನು ನೋಡಲು ಬಂದ ಪತ್ನಿ ವಿಜಯಲಕ್ಷ್ಮಿ ಅರ್ಧದಿಂದಲೇ ವಾಪಸ್ ಆದ ಘಟನೆ ನಡೆದಿದೆ. ಪರಪ್ಪನ ಅಗ್ರಹಾರ ಜೈಲಿನ ಸಮೀಪ ಬಂದ ವಿಜಯಲಕ್ಷ್ಮಿ ಅಲ್ಲಿಂದಲೇ ಯೂ ಟರ್ನ್ ಆಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರದಿಂದ ದರ್ಶನ್ ಆಂಡ್ ಗ್ಯಾಂಗ್ ನ್ಯಾಯಾಂಗ ಬಂಧನದಲ್ಲಿದ್ದಾರೆ. 10 ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಬಳಿಕ ದರ್ಶನ್ ಆಂಡ್ ಗ್ಯಾಂಗ್ ಈಗ ಜೈಲು ವಾಸದಲ್ಲಿದ್ದಾರೆ. ಎರಡು ದಿನಗಳಿಂದ ಸಾಮಾನ್ಯ ಕೈದಿಗಳಂತೇ ದರ್ಶನ್ ಮತ್ತು ಗ್ಯಾಂಗ್ ನ್ನು ಟ್ರೀಟ್ ಮಾಡಲಾಗುತ್ತಿದೆ.
ನಿನ್ನೆ ಭಾನುವಾರವಾಗಿದ್ದರಿಂದ ಆರೋಪಿಗಳ ಕುಟುಂಬಸ್ಥರ ಭೇಟಿಗೆ ಅವಕಾಶವಿರಲಿಲ್ಲ. ಇಂದು ದರ್ಶನ್ ಭೇಟಿಗೆ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ಕಾರಿನಲ್ಲಿ ಬಂದಿದ್ದರು. ಆದರೆ ಪರಪ್ಪನ ಅಗ್ರಹಾರದ ಬಳಿ ಮಾಧ್ಯಮಗಳ ದಂಡು ನೋಡಿ ವಿಜಯಲಕ್ಷ್ಮಿ ಕಾರು ಯೂ ಟರ್ನ್ ತೆಗೆದುಕೊಂಡು ವಾಪಸಾಗಿದೆ.
ಈ ಪ್ರಕರಣದಲ್ಲಿ ವಿಜಯಲಕ್ಷ್ಮಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮಾಧ್ಯಮಗಳು ತಮ್ಮ ಪತಿ ಬಗ್ಗೆ ಯಾವುದೇ ಅವಹೇಳನಾಕರೀ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವುದಾಗಿ ಹೇಳಿದ್ದರು. ಇದರ ಹೊರತಾಗಿ ಅವರು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ.