ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಗೆ ಬೀಗ ಮುದ್ರೆ ಹಾಕಲಾಗಿದೆ. ಇದರ ನಡುವೆಯೂ ಬಿಗ್ ಬಾಸ್ ಸ್ಪರ್ಧಿಗಳು ಎಲಿಮಿನೇಟ್ ಆಗದಂತೆ ವೋಟ್ ಮಾಡಿ ಎಂದು ವಾಹಿನಿ ಪೋಸ್ಟ್ ಮಾಡಿದೆ. ಆದರೆ ಇದಕ್ಕೆ ವೀಕ್ಷಕರ ಕಾಮೆಂಟ್ ಮಾತ್ರ ಸಖತ್ ಆಗಿದೆ.
ಅಡಚಣೆಗಳ ನಡುವೆಯೂ ಬಿಗ್ ಬಾಸ್ ಶೋ ಮುಂದುವರಿಸಲು ವಾಹಿನಿ ಗಟ್ಟಿಯಾಗಿ ತೀರ್ಮಾನಿಸಿದೆ. ಹೀಗಾಗಿಯೇ ಸ್ಪರ್ಧಿಗಳನ್ನು ರೆಸಾರ್ಟ್ ಗೆ ಸ್ಥಳಾಂತರಿಸಲಾಗಿದೆ. ಇದೀಗ ಇಂದೂ ಕೂಡಾ ಬಿಗ್ ಬಾಸ್ ಸಂಚಿಕೆ ಪ್ರಸಾರವಾಗಲಿದೆ ಎಂದು ಪ್ರೋಮೋಗಳನ್ನು ನೀಡಿದೆ.
ಇದರ ಜೊತೆಗೆ ಈ ವಾರ ಹೊರಹೋಗಲು ನಾಮಿನೇಟ್ ಆದ ಸ್ಪರ್ಧಿಗಳನ್ನು ಉಳಿಸಲು ವೋಟ್ ಮಾಡಿ ಎಂದು ಪೋಸ್ಟ್ ಮಾಡಿದೆ. ಇದಕ್ಕೆ ವೀಕ್ಷಕರು ಸಖತ್ ಕೌಂಟರ್ ಕೊಟ್ಟಿದ್ದಾರೆ. ಮೊದಲು ನಿಮ್ಮ ಮನೆ ಉಳಿಸಿಕೊಳ್ಳಿ ಎಂದಿದ್ದಾರೆ.
ನಾವು ಈಗ ಸ್ಪರ್ಧಿಗಳನ್ನು ಉಳಿಸಿಕೊಳ್ಳಲು ವೋಟ್ ಮಾಡಬೇಕಾ, ಬಿಗ್ ಬಾಸ್ ಮನೆ ಉಳಿಸಿಕೊಳ್ಳಲು ವೋಟ್ ಮಾಡಬೇಕಾ ಎಂದು ವೀಕ್ಷಕರು ಕಾಲೆಳೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಿಯಮ ಮುರಿದವರಿಗೆ ಕಠಿಣ ಶಿಕ್ಷೆ ಕೊಡುತ್ತೀರಿ. ಈಗ ನೀವೂ ನಿಯಮ ಮುರಿದಿದ್ದೀರಿ. ನಿಮಗೆ ಯಾವ ಶಿಕ್ಷೆ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.