ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ವರ್ಷದ ಅನುಬಂಧ ಪ್ರಶಸ್ತಿ ಸಮಾರಂಭಕ್ಕೆ ಈ ಬಾರಿ ವಿಶೇಷ ಅತಿಥಿಯಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಕರೆತರಲಾಗಿದೆ. ಆದರೆ ವೀರೇಂದ್ರ ಹೆಗ್ಗಡೆಯವರನ್ನು ನೋಡಿ ನೆಟ್ಟಿಗರಲ್ಲಿ ಕೆಲವರು ಸೌಜನ್ಯ ಕೇಸ್ ನೆನಪಿಸಿದ್ದಾರೆ.
ಅನುಬಂಧ ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ನಡೆದಿದೆ. ಇದರ ಪ್ರೋಮೋಗಳು ಈಗಾಗಲೇ ವಾಹಿನಿ ಪ್ರಸಾರ ಮಾಡಿದೆ. ಆದರೆ ಕಲರ್ಸ್ ಅನುಬಂಧ ಕಾರ್ಯಕ್ರಮದ ಸಂಪೂರ್ಣ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ. ಆದರೆ ಕಾರ್ಯಕ್ರಮದ ಕೆಲವು ತುಣುಕುಗಳನ್ನು ಬಿಡಲಾಗಿದ್ದು ವೀರೇಂದ್ರ ಹೆಗ್ಗಡೆಯವರು ಬಂದಿರುವುದು ಖಾತ್ರಿಯಾಗಿದೆ.
ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ವಿಶೇಷ ಅತಿಥಿಯಾಗಿದ್ದರು. ಅವರಿಗೆ ಕಲರ್ಸ್ ವಾಹಿನಿಯ ನಾಯಕಿಯರು ವೇದಿಕೆಯ ಮೇಲೆ ಪ್ರಶ್ನೆಗಳನ್ನು ಕೇಳಿದ್ದರು. ಈ ಬಾರಿ ವೀರೇಂದ್ರ ಹೆಗ್ಗಡೆಯವರು ಅತಿಥಿಯಾಗಿದ್ದು ಅವರಿಗೆ ವಾಹಿನಿಯ ಬಾಲಕಲಾವಿದರಿಂದ ಪ್ರಶ್ನೆ ಕೇಳಿಸಲಾಗಿದೆ.
ಆದರೆ ಈ ಪ್ರೋಮೋ ನೋಡಿ ನೆಟ್ಟಿಗರಲ್ಲಿ ಕೆಲವರು ಹಾಗೆಯೇ ಸೌಜನ್ಯ ಕೇಸ್ ಬಗ್ಗೆಯೂ ಕೇಳಿ ಎಂದಿದ್ದಾರೆ. ಮತ್ತೆ ಕೆಲವರು ಬೇರೆ ಯಾರೂ ಸಿಗಲಿಲ್ಲವೇ ನಿಮಗೆ ಎಂದು ಕಿಡಿ ಕಾರಿದ್ದಾರೆ. ಎಲ್ಲರನ್ನೂ ಆಳುವ ಇವರಿಗೆ ತಮ್ಮ ಕ್ಷೇತ್ರದ ಮುಗ್ದ ಹೆಣ್ಣಿಗೆ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲವಲ್ಲಾ ಎಂದು ಕಾಮೆಂಟ್ ಮಾಡಿದ್ದಾರೆ. ಧರ್ಮಸ್ಥಳದಲ್ಲಿ ಕಾಲೇಜಿಗೆ ಹೋಗಿ ಮರಳುತ್ತಿದ್ದ ಸೌಜನ್ಯ ಎಂಬ ಅಪ್ರಾಪ್ತ ಯುವತಿಯನ್ನು ರೇಪ್ ಮಾಡಿ ಹತ್ಯೆ ಮಾಡಲಾಗಿತ್ತು. ಆದರೆ ಇದುವರೆಗೆ ತಪ್ಪಿತಸ್ಥರನ್ನು ಪತ್ತೆ ಮಾಡಿ ಬಂಧಿಸಲು ಸಾಧ್ಯವಾಗಿಲ್ಲ.