ಚೆನ್ನೈ: ಪೊಲೀಸ್ ಮೂಲಗಳಿಂದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಧನುಷ್ ಅವರಿಗೆ ಬಾಂಬ್ ಬೆದರಿಕೆಯ ಇ– ಮೇಲ್‌ಗಳು ಬಂದಿರುವ ಬಗ್ಗೆ ವರದಿಯಾಗಿದೆ.
ಸೋಮವಾರ (ಅ.27) ಬೆಳಿಗ್ಗೆ 8.30ರ ಸುಮಾರಿಗೆ ರಜನಿಕಾಂತ್ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಇ–ಮೇಲ್ ಪೊಲೀಸರಿಗೆ ಬಂದಿದೆ. ಈ ಹಿನ್ನೆಲೆ ಪೊಲೀಸರು ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ರಜನಿಕಾಂತ್ ಮನೆಗೆ ತೆರಳಿದಾಗ ಅವರು ಶೋಧಕಾರ್ಯಾಚರಣೆ ಅಗತ್ಯವಿಲ್ಲ ಎಂದು ನಿರಾಕರಿಸಿದರು.
ಇದರ ಬೆನ್ನಲ್ಲೇ ಸಂಜೆ 6.30ರ ಸುಮಾರಿಗೆ 2ನೇ ಬಾಂಬ್ ಬೆದರಿಕೆ ಪತ್ರ ಬಂದಿದೆ. ಆಗಲೂ ರಜನಿಕಾಂತ್ ಭದ್ರತಾ ಸಿಬ್ಬಂದಿ ತಪಾಸಣೆಯನ್ನು ನಿರಾಕರಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅದೇ ದಿನ ನಟ ಧನುಷ್ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಪತ್ರ ಬಂದಿದೆ. ಅವರು ಸಹ ಶೋಧಕಾರ್ಯಾಚರಣೆ ನಿರಾಕರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರಮುಖ ವ್ಯಕ್ತಿಗಳಿಗೆ ಇದೇ ರೀತಿಯ ಬೆದರಿಕೆ ಇ–ಮೇಲ್‌ಗಳು ಬರುತ್ತಿದ್ದು, ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.