ಬೆಂಗಳೂರು: ನಂದಗೋಕುಲ ಧಾರವಾಹಿ ಮೂಲಕ ಎಲ್ಲರ ಮನೆ ಮಗನಾಗಿ ಮಿಂಚುತ್ತಿರುವ ನಟ ಅಭಿಷೇಕ್ ರಾಮ್ ದಾಸ್ ಈಗ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ಚಿಕ್ಕದಣಿಯಾಗಿ ಖಡಕ್ ಪಾತ್ರದಲ್ಲಿ ಮಿಂಚಲಿದ್ದಾರೆ.
ಜಡೇಶ್ ಹಂಪಿ ನಿರ್ದೇಶನದ ಲ್ಯಾಂಡ್ ಲಾರ್ಡ್ ಸಿನಿಮಾ ಶೂಟಿಂಗ್ ಮುಗಿಸಿ ಮುಂದಿನ ತಿಂಗಳು ಬಿಡುಗಡೆಯಾಗುವ ನೀರಿಕ್ಷೆಯಲ್ಲಿದೆ. ದುನಿಯಾ ವಿಜಯ್, ರಚಿತಾ ರಾಮ್ ಸೇರಿದಂತೆ ಬಹುತಾರಾಗಣವಿರುವ ಧಾರವಾಹಿಯಲ್ಲಿ ಅಭಿದಾಸ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಅಭಿದಾಸ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಇದುವರೆಗೆ ಚಾಕಲೇಟ್ ಹೀರೋ, ತರ್ಲೆ ಕಾಲೇಜು ಹುಡುಗನ ಪಾತ್ರ ಮಾಡಿದ್ದ ಅಭಿದಾಸ್ ಈ ಸಿನಿಮಾದಲ್ಲಿ ರಗಡ್ ಪಾತ್ರ ಮಾಡಿದ್ದಾರೆ.
ಈ ಸಿನಿಮಾ ನನ್ನ ಕೆರಿಯರ್ ನಲ್ಲಿ ಇದುವರೆಗೆ ಬಂದಿರುವ ಪಾತ್ರಕ್ಕಿಂತ ಭಿನ್ನ ಎನ್ನುತ್ತಾರೆ ಅವರು. ಇದುವರೆಗೆ ಸಾಫ್ಟ್ ಪಾತ್ರ ಮಾಡುತ್ತಿದ್ದೆ. ಈ ಸಿನಿಮಾದಲ್ಲಿ ಕಣ್ಣಿನಿಂದಲೇ ಲುಕ್ ಕೊಡುವ, ಖಡಕ್ ಪಾತ್ರ ಮಾಡುತ್ತಿದ್ದೇನೆ. ಈ ಸಿನಿಮಾಗಾಗಿ ಸಾಕಷ್ಟು ತಯಾರಿಯೂ ಮಾಡಿಕೊಂಡಿದ್ದೆ. ವಿಲನ್ ಆಗಿ ಕಾಣಿಸಿಕೊಳ್ಳಲು ತೂಕ ಹೆಚ್ಚಿಸಿಕೊಂಡಿದ್ದೆ. ಅದರಲ್ಲೂ ದುನಿಯಾ ವಿಜಿ ಸರ್ ಮುಂದೆ ಕೆಲವು ಸಾಹಸ ಸನ್ನಿವೇಶಗಳನ್ನೂ ಮಾಡಿದ್ದೇನೆ. ಈ ಸಿನಿಮಾದಲ್ಲಿ ನನಗೆ ಡೈಲಾಗ್ ಗಳಿಗಿಂತ ಕಣ್ಣಲ್ಲೇ ಅಭಿನಯ ಮಾಡುವ ಚಾಲೆಂಜ್ ಇತ್ತು. ಅದೆಲ್ಲಾ ಮರೆಯಲಾಗದ ಅನುಭವಗಳು. ಈ ಸಿನಿಮಾ ಬಗ್ಗೆ ನನಗೆ ಸಾಕಷ್ಟು ನಿರೀಕ್ಷೆಯಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ನವಂಬರ್ 1 ರಂದು ಲ್ಯಾಂಡ್ ಲಾರ್ಡ್ ಟೀಸರ್ ರಿಲೀಸ್ ಆಗುತ್ತಿದೆ. ಇದೇ ತಿಂಗಳು ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಕಾಟೇರ ಸಿನಿಮಾ ಬರಹಗಾರ ಜಡೇಶ್ ಹಂಪಿ ನಿರ್ದೇಶನದ ಸಿನಿಮಾವಿದು. ಈ ಸಿನಿಮಾಗೂ ಕೊಂಚ ಕಾಟೇರ ಸಿನಿಮಾದ ಶೇಡ್ ಇದೆ ಎಂದು ಅಭಿದಾಸ್ ಹೇಳಿದ್ದಾರೆ.