ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಪತ್ನಿ ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಬರಹ ಬರೆದುಕೊಂಡಿದ್ದಾರೆ.
ನೀವಿಲ್ಲದ ಎರಡು ವರ್ಷ..ನಿಮ್ಮನ್ನು ನೋಡಲೋಸ್ಕರ ನಾನು ಆಗಾಗ ಕಣ್ಣು ಮುಚ್ಚಿಕೊಂಡು ನೆನೆಸಿಕೊಳ್ಳುತ್ತೇನೆ. ನಿಮ್ಮ ಧ್ವನಿ ಕೇಳಲು ಆಗಾಗ ಕಿವಿ ಮುಚ್ಚಿಕೊಳ್ಳುತ್ತೇನೆ. ಆದರೆ ನನ್ನ ಹೃದಯವನ್ನು ಮುಚ್ಚಲಾರೆ. ಅದು ನಿಮ್ಮ ಪ್ರೀತಿಯನ್ನು, ಐಕ್ಯತೆಯನ್ನು, ಎಲ್ಲಾ ನೆನಪುಗಳನ್ನು ಹೊತ್ತು ನಡೆಯಬೇಕು. ನಿಮ್ಮ ನೆನಪನ್ನು ಹೊತ್ತುಕೊಳ್ಳುವಷ್ಟು ದೊಡ್ಡ ಹೃದಯ ಈ ಜಗತ್ತಿನಲ್ಲೇ ಇಲ್ಲ ಬಿಡಿ. ನೀವಿಲ್ಲದ ಎರಡು ವರ್ಷ, ಪ್ರತಿಕ್ಷಣವನ್ನೂ ನೆನೆಸಿಕೊಳ್ಳುತ್ತಿದ್ದೆ ಮತ್ತು ನೀವು ನಮಗೆ ಮಾಡಿದ ಒಳಿತನ್ನು ನೆನೆಸಿಕೊಳ್ಳುತ್ತಿದ್ದೆ. ಆ ಕ್ಷಣಗಳು, ಆ ನಗು ಎಲ್ಲವೂ.. ನೀವು ಬಿಟ್ಟು ಹೋದ ಪ್ರೀತಿ, ಒಳ್ಳೆಯ ಕೆಲಸಗಳು ನಮ್ಮ ಭವಿಷ್ಯಕ್ಕೆ ಶ್ರೀರಕ್ಷೆ. ನನ್ನ ಕೊನೆಯ ಉಸಿರುವವರೆಗೂ, ನನ್ನ ಪ್ರತೀ ನಗುವಿನಲ್ಲೂ ನೀವಿರುತ್ತೀರಿ. ನನಗೆ ಏನೇ ಆದರೂ ನೀವು ನನ್ನನ್ನು ಕೈ ಹಿಡಿಯುತ್ತೀರಿ ಎಂದು ಗೊತ್ತು. ಮತ್ತೆ ನಾವು ಒಂದಾಗುವವರೆಗೂ ನನಗೆ ಶಕ್ತಿ ನೀಡಿ ಎಂದು ಸುಮಲತಾ ಸುದೀರ್ಘವಾಗಿ ಭಾವುಕ ಸಂದೇಶ ಬರೆದಿದ್ದಾರೆ.