ಬೆಂಗಳೂರು: ಪ್ರಕಾಶ್ ತುಮಿನಾಡು ನಿರ್ದೇಶಿಸಿ ನಟಿಸಿರುವ ಸು ಫ್ರಮ್ ಸೋ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆಯನ್ನೇ ಮಾಡುತ್ತಿದೆ. ಬಿಡುಗಡೆಯಾಗಿ ಎರಡನೇ ವಾರದಲ್ಲೂ ಸಿನಿಮಾ ಗಳಿಕೆಯಲ್ಲಿ ದಾಖಲೆ ಮಾಡಿದೆ.
ನಿನ್ನೆ ಭಾನುವಾರವಾಗಿದ್ದರಿಂದ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಯಾವುದೇ ಸ್ಟಾರ್ ಗಳಿಲ್ಲದ ಸಿನಿಮಾ ಬಿಡುಗಡೆಯಾಗಿ ಎರಡನೇ ವಾರದಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದರೆ ಅದು ಸ್ಯಾಂಡಲ್ ವುಡ್ ಮಟ್ಟಿಗೆ ದಾಖಲೆಯೇ ಸರಿ.
ನಿನ್ನೆ ಭಾನುವಾರವಾಗಿದ್ದರಿಂದ ಸಾಕಷ್ಟು ಜನ ಥಿಯೇಟರ್ ಗೆ ಬಂದು ಸಿನಿಮಾ ನೋಡಿದ್ದಾರೆ. ಹೀಗಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಶೋ ಸಂಖ್ಯೆ ಹೆಚ್ಚಿಸಲಾಗಿತ್ತು. ಬೆಂಗಳೂರಿನಲ್ಲಿ ಮಾತ್ರ 450 ಕ್ಕೂ ಅಧಿಕ ಶೋ ಕಂಡಿದೆ. ರಾಜ್ಯದ ವಿವಿಧೆಡೆಯೂ ಹೌಸ್ ಫುಲ್ ಪ್ರದರ್ಶನ ಕಂಡಿದೆ.
ಹೀಗಾಗಿ ನಿನ್ನೆ ಒಂದೇ ದಿನ ಚಿತ್ರ 6 ಕೋಟಿ ರೂ. ಗಳಿಕೆ ಮಾಡಿದೆ. ಚಿತ್ರದ ಗಳಿಕೆ ಈಗ 35.60 ಕೋಟಿ ರೂ. ತಲುಪಿದೆ. ಇಂದೂ ಕೂಡಾ ಬಹುತೇಕ ಶೋಗಳಿಗೆ ಬೇಡಿಕೆಯಿದೆ. ಈಗಿನ ಬೇಡಿಕೆ ಗಮನಿಸಿದರೆ ಸಿನಿಮಾ ಸದ್ಯದಲ್ಲೇ 50 ಕೋಟಿ ಕ್ಲಬ್ ಸೇರುವುದು ಖಚಿತವಾಗಿದೆ. ನೆನಪಿರಲಿ, ಈ ಸಿನಿಮಾದ ಬಜೆಟ್ ಹೆಚ್ಚೆಂದರೆ 3-4 ಕೋಟಿ ರೂ. ಅಷ್ಟೇ. ಆದರೆ ಗಳಿಕೆ ಮಾಡಿದ್ದು ಮಾತ್ರ 10 ಪಟ್ಟು ಹೆಚ್ಚು.