ಬೆಂಗಳೂರು: ಸದ್ದಿಲ್ಲದೆ ನೂರು ಕೋಟಿ ಕ್ಲಬ್ ಸೇರಿದ ಕನ್ನಡದ ಸು ಫ್ರಮ್ ಸೋ ಚಿತ್ರವು ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ ಬರಲು ಸಜ್ಜಾಗಿದೆ.
ಚಿತ್ರಮಂದಿರಗಳಲ್ಲಿ ಸು ಫ್ರಮ್ ಸೋ ಸಿನಿಮಾ ಅಬ್ಬರಿಸಿದೆ. ಈಗಲೂ ಕೂಡ ಈ ಅನೇಕ ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. 44 ದಿನ ಕಳೆದರೂ ಚಿತ್ರಮಂದಿರದಲ್ಲಿ ಓಡುತ್ತಿದೆ. ಈ ಮಧ್ಯೆ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ.
ಸು ಫ್ರಮ್ ಸೋ ಒಟಿಟಿ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಜೆಪಿ ತುಮಿನಾಡು, ಶನೀಲ್ ಗೌತಮ್, ಸಂಧ್ಯಾ ಅರಕೆರೆ, ರಾಜ್ ಬಿ. ಶೆಟ್ಟಿ ಮುಂತಾದವರು ನಟಿಸಿರುವ ಈ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಜಿಯೋ ಹಾಟ್ಸ್ಟಾರ್ ಮೂಲಕ ಸೆಪ್ಟೆಂಬರ್ 9ರಿಂದ ಪ್ರಸಾರ ಆರಂಭಿಸಲಿದೆ.
ಜೆ.ಪಿ. ತುಮಿನಾಡು ಅವರು ಸು ಫ್ರಮ್ ಸೋ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ದೊಡ್ಡ ಪರದೆಯಲ್ಲಿ ನೋಡಿ ಎಂಜಾಯ್ ಮಾಡಿದ ಬಳಿಕ ಪ್ರೇಕ್ಷಕರು ಒಟಿಟಿಯಲ್ಲಿ ಮತ್ತೊಮ್ಮೆ ನೋಡಲು ಕಾದಿದ್ದಾರೆ. ಒಳ್ಳೆಯ ಮೊತ್ತಕ್ಕೆ ಒಟಿಟಿ ಪ್ರಸಾರ ಹಕ್ಕುಗಳು ಸೇಲ್ ಆಗಿವೆ ಎನ್ನಲಾಗಿದೆ.
ಕರಾವಳಿ ಭಾಗದ ಪ್ರತಿಭೆಗಳ ಪ್ರಯತ್ನಕ್ಕೆ ಇಡೀ ರಾಜ್ಯದ ಜನರು ಭೇಷ್ ಎಂದಿದ್ದಾರೆ. ಎಲ್ಲ ಕಡೆಗಳಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗು ಮತ್ತು ಮಲಯಾಳಂ ಭಾಷೆಗೂ ಡಬ್ ಆಗಿ ಒಳ್ಳೆಯ ಕಮಾಯಿ ಮಾಡಿದೆ. ವಿಶ್ವಾದ್ಯಂತ ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 120 ಕೋಟಿ ಚಾಚಿಕೊಂಡಿದೆ.