ಬೆಂಗಳೂರು: ಜಾಲಿಡೇಸ್ ಖ್ಯಾತಿಯ ನಟಿ ಸ್ಪೂರ್ತಿ ವಿಶ್ವಾಸ್ ಕೊರೊನಾ ಬಳಿಕ ತಾವು ಅನುಭವಿಸಿದ ಮಾನಸಿಕ ತೊಂದರೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
Photo Courtesy: Instagram
ಇದು ನನ್ನ ವೈಯಕ್ತಿಕ ಅನುಭವ. ನನಗೆ ಕಳೆದ ಒಂದು ವಾರದಿಂದ ತಲೆನೋವು ಬಿಟ್ಟು, ಮೈ ಕೈ ನೋವು ಬಿಟ್ಟು ಬೇರೆ ಏನೂ ಲಕ್ಷಣಗಳಿಲ್ಲ. (ಜ್ವರ, ನೆಗಡಿ, ಕೆಮ್ಮು ಕೂಡಾ ಇಲ್ಲ). ಔಷಧಿ ಸೇವಿಸಿದರೂ ಗುಣವಾಗಲಿಲ್ಲ. ನನ್ನ ತಂಡದ ಸದಸ್ಯರೊಬ್ಬರಿಗೆ ಕೊರೋನಾ ಪಾಸಿಟಿವ್ ವರದಿ ಬಂದಾಗ ನಾನೂ ಪರೀಕ್ಷಿಸಲು ಹೋದೆ. (ಇದಕ್ಕೂ ಮೊದಲು 2020ರಲ್ಲಿ ಒಮ್ಮೆ ನನಗೆ ಕೊವಿಡ್ ಬಂದು ಗುಣಮುಖನಾಗಿದ್ದೆ. 28 ದಿನ ನನ್ನ ಮಗಳಿಂದ ದೂರವಾಗಿದ್ದೆ. ಆದರೂ ಯಾವುದೇ ಆತಂಕಕ್ಕೊಳಗಾಗಿರಲಿಲ್ಲ) ನಿಮ್ಮ ತಾಪಮಾನ 102 ಕ್ಕಿಂತ ಹೆಚ್ಚಿಲ್ಲದೇ ಇದ್ದರೆ, ಆಕ್ಸಿಜನ್ ಲೆವೆಲ್ 95 ಕ್ಕಿಂತ ಕೆಳಗೆ ಇಲ್ಲದೇ ಇದ್ದರೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ನನಗೆ ಗೊತ್ತಿತ್ತು. ಹಾಗಿದ್ದರೂ ಪರೀಕ್ಷೆ ಮಾಡಿಸಿಕೊಂಡೆ. ವರದಿ ನೆಗೆಟಿವ್ ಬಂತು. ನಾನು ತವರು ಮನೆಗೆ ಬಂದು ಐಸೋಲೇಟ್ ಆಗಿದ್ದೆ. ಮಗಳು ಸಾನ್ವಿ ಅವಳ ತಂದೆಯ ಜೊತೆಯಲ್ಲಿದ್ದಳು. ಹೀಗಾಗಿ ನನಗೆ ಮಾತ್ರ ಸೋಂಕು ಉಂಟಾಗಿತ್ತು.
ನೆಗೆಟಿವ್ ವರದಿ ಬಂದರೂ ನನ್ನ ಆತಂಕ ಕಡಿಮೆಯಾಗಿರಲಿಲ್ಲ. ಹೊರಗಿನಿಂದ ಬರುತ್ತಿದ್ದ ಸುದ್ದಿಗಳನ್ನೆಲ್ಲಾ ಕೇಳಿ ತಲೆಯಲ್ಲಿ ಬೇಡದ ಯೋಚನೆಗಳು, ನಾನು ಆತಂಕಕ್ಕೊಳಗಾಗಿದ್ದೆ. ಹೀಗಾಗಿ ಕೆಲವು ದಿನ ನನ್ನ ಫೋನ್, ಟಿವಿಯಿಂದ ದೂರವಿದ್ದೆ. ಕೇವಲ ನನ್ನ ಬಗ್ಗೆ ನಿಜವಾಗಿ ಕಾಳಜಿ ಮಾಡುವವರ ಕರೆಗಳನ್ನು ಮಾತ್ರ ಸ್ವೀಕರಿಸುತ್ತಿದ್ದೆ.ಆದರೂ ಸಮಾಧಾನವಾಗಿರಲಿಲ್ಲ. ನಾನು ಫೋರ್ಟಿಸ್ ಆಸ್ಪತ್ರೆಗೆ ಮತ್ತೆ ಪರೀಕ್ಷೆ ಮಾಡಲು ಹೋದೆ. ಅಲ್ಲಿ ವೈದ್ಯರು ನನ್ನ ಎಲ್ಲಾ ರೀತಿಯ ಪರೀಕ್ಷೆ ಮಾಡಿ ನಾರ್ಮಲ್ ಎಂದರು. ಆದರೆ ನನ್ನ ಮನಸ್ಸು ಮಾತ್ರ ಅಬ್ ನಾರ್ಮಲ್ ಆಗಿತ್ತು. ಎಲ್ಲಾ ವೈದ್ಯರು ನನಗೆ ಕೊರೋನಾ ಇಲ್ಲ. ಇದು ಕೇವಲ ಆತಂಕ (Anxiety) ಅಷ್ಟೇ ಅಂದರು. ನನ್ನಂತಹ ಮಾನಸಿಕವಾಗಿ ಗಟ್ಟಿಯಾಗಿರುವ ವ್ಯಕ್ತಿಯೇ ಈ ರೀತಿ ಕುಸಿದು ಕೂರಬೇಕಾದರೆ ದುರ್ಬಲವಾಗಿರುವವರ ಕತೆ ಏನಾಗಬಹುದು? ಹಾಗಾಗಿ ನಿಮಗೆ ಏನೇ ಆಗುತ್ತಿದ್ದರೂ ನಿಮ್ಮನ್ನು ನಿಜವಾಗಿ ಕೇರ್ ಮಾಡುವವರ ಜೊತೆ ಮಾತನಾಡಿ, ಮನಸ್ಸಿನ ಆತಂಕ ಮುಕ್ತವಾಗಿ ಹಂಚಿಕೊಳ್ಳಿ. ಅಲ್ಲಿ ಇಲ್ಲಿ ಕೇಳುವ ಸುದ್ದಿಗಳನ್ನು ನಂಬಿ ಭಯಪಡಬೇಡಿ. ನಾನು ಮತ್ತೊಮ್ಮೆ ಹೇಳುತ್ತೇನೆ, ನಿಮಗೆ ಆಕ್ಸಿಜನ್ ಲೆವೆಲ್ 95 ಕ್ಕಿಂತ ಕಡಿಮೆಯಾದರೆ, 102 ಕ್ಕಿಂತ ಹೆಚ್ಚು ತಾಪಮಾನವಿದ್ದರೆ ಮಾತ್ರ ಆಸ್ಪತ್ರೆಗೆದಾಖಲಾಗಬೇಕಾಗುತ್ತದೆ. ಇಲ್ಲದೇ ಹೋದರೆ ತಲೆಕೆಡಿಸಿಕೊಳ್ಳಬೇಡಿ. ಆರಾಮವಾಗಿರಿ ಎಂದು ಸ್ಪೂರ್ತಿ ವಿಶ್ವಾಸ್ ಸುದೀರ್ಘವಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.