ಬೆಂಗಳೂರು: ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂಗೆ ಇಂದು ಜನ್ಮದಿನದ ಸಂಭ್ರಮ. ಕನ್ನಡ, ತಮಿಳು, ಹಿಂದಿ, ತೆಲುಗು ಸೇರಿದಂತೆ 16 ಭಾಷೆಗಳಲ್ಲಿ 4000 ಕ್ಕೂ ಹೆಚ್ಚು ಹಾಡು ಹಾಡಿರುವ ಎಸ್ ಪಿಬಿಗೆ ಇಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಷಯ ಕೋರುತ್ತಿದ್ದಾರೆ.
ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯದೇ ಎಸ್ ಪಿಬಿ ಸಂಗೀತ ಲೋಕದಲ್ಲಿ ಮಾಡಿದ ಮಾಯೆ ಎಲ್ಲರೂ ಅನುಕರಿಸುವಂತದ್ದು. ಇದುವರೆಗೆ 6 ರಾಷ್ಟ್ರ ಪ್ರಶಸ್ತಿ, 6 ಫಿಲಂ ಫೇರ್ ಅವಾರ್ಡ್, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾದ ಅಪರೂಪದ ಗಾಯಕ ಎಸ್ ಪಿಬಿ.
ಮೂಲತಃ ತೆಲುಗಿನವರಾದರೂ ಕನ್ನಡ ಸೇರಿದಂತೆ ಹಲವು ಭಾಷೆಗಳನ್ನು ಸರಾಗವಾಗಿ ಮಾತಾಡಬಲ್ಲರು. ಡಾ.ರಾಜ್ ಕುಮಾರ್ ಬಳಿಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಗಾಯಕ ಎಸ್ ಪಿಬಿ. ಒಂದು ಕಾಲದಲ್ಲಿ ದಿನಕ್ಕೆ ಐದರಿಂದ ಆರು ಹಾಡುಗಳನ್ನು ರೆಕಾರ್ಡಿಂಗ್ ಮಾಡುತ್ತಿದ್ದ ಬೇಡಿಕೆಯ ಗಾಯಕ. ಈ ಗಾನ ದಿಗ್ಗಜನಿಗೆ ಇಂದು 75 ವರ್ಷ. ಅವರಿಗೊಂದು ಹ್ಯಾಪೀ ಬರ್ತ್ ಡೇ.