ಬೆಂಗಳೂರು: ಅಪ್ಪಟ ಕನ್ನಡ ನಟಿ ಸೋನು ಗೌಡ ತಮ್ಮ ವೈವಾಹಿಕ ಜೀವನ ಬಿರುಕಿನ ಬಗ್ಗೆ ರಾಜೇಶ್ ಗೌಡ ಜೊತೆಗಿನ ಯೂ ಟ್ಯೂಬ್ ಸಂವಾದದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಗಂಡನ ಜೊತೆ ಭಿನ್ನಾಭಿಪ್ರಾಯ ಹೆಚ್ಚಾದಾಗ ಎಲ್ಲರೂ ಮಗು ಮಾಡ್ಕೋ ಎಂದು ಸಲಹೆ ಕೊಟ್ಟಿದ್ದರು ಎಂದಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ ಸೋನು ಗೌಡ ಖ್ಯಾತ ಮೇಕಪ್ ಆರ್ಟಿಸ್ಟ್ ರಾಮಕೃಷ್ಣ ಗೌಡ ಮಗಳು. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದ ಸೋನು ಗೌಡ 20 ವರ್ಷಕ್ಕೇ ತಮ್ಮನ್ನು ಪ್ರೀತಿಸಿದ್ದ ಯುವಕನ ಜೊತೆ ಮದುವೆಯೂ ಆದರು. ಆದರೆ ಇವರ ದಾಂಪತ್ಯ ಹೆಚ್ಚು ದಿನ ಉಳಿಯಲಿಲ್ಲ. ಕೆಲವು ವರ್ಷಗಳ ಹಿಂದೆ ಇಬ್ಬರೂ ವಿಚ್ಛೇದನ ಪಡೆದುಕೊಂಡರು.
ತಮ್ಮ ವೈವಾಹಿಕ ಜೀವನದ ಬಿರುಕಿನ ಬಗ್ಗೆ ಯೂ ಟ್ಯೂಬ್ ಸಂದರ್ಶನದಲ್ಲಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. ವಿಶೇಷವೆಂದರೆ ಗಂಡನಿಂದ ದೂರವಾಗಿದ್ದರೂ ಅವರು ತನ್ನ ಮಾಜಿ ಗಂಡನ ಬಗ್ಗೆ ಒಂದೇ ಒಂದು ಕೆಟ್ಟ ಮಾತನಾಡಿಲ್ಲ. ಹಾಗಿದ್ರೂ ಅವರ ಜೀವನ ಕತೆ ಕೇಳಿ ನೆಟ್ಟಿಗರು ನಿಜಕ್ಕೂ ನಿಮ್ಮ ಹಿಂದೆ ಇಷ್ಟು ನೋವಿದೆ ಎಂದು ಗೊತ್ತಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಒಂದು ಹಂತದಲ್ಲಿ ನಮ್ಮ ನಡುವಿನ ಭಿನ್ನಾಭಿಪ್ರಾಯ ಮಿತಿ ಮೀರಿತ್ತು. ಆಗ ಇನ್ನು ಆಗಲ್ಲ ಎಂದುಕೊಂಡಿದ್ದೆ. ಆದರೆ ಅಮ್ಮನಿಗೆ ಆಗಲೂ ನಂಬಿಕೆಯಿತ್ತು. ಒಂದು ಮಗು ಮಾಡ್ಕೋ ಆಗ ಮಗುವಿನ ನೆಪದಲ್ಲಾದರೂ ಅವನು ಜವಾಬ್ಧಾರಿ ಕಲಿಯುತ್ತಾನೆ. ಮಗುವಿಗಾಗಿ ಆದ್ರೂ ನಿಮ್ಮ ಜೀವನ ಸರಿ ಹೋಗುತ್ತದೆ ಎಂದಿದ್ದರು.
ಕೆಲವರು ಇದೇ ಸಲಹೆ ನೀಡಿದ್ದರು. ಆದರೆ ಅದಕ್ಕೆ ನಾನು ತಯಾರಿರಲಿಲ್ಲ. ಆತ ನನ್ನನ್ನು ನೋಡಿಕೊಳ್ಳುತ್ತಾನೆ ಎಂಬ ನಂಬಿಕೆಯಿಂದ ಮದುವೆಯಾದೆ. ಇಷ್ಟು ದಿನ ಆದ್ರೂ ಸುಧಾರಿಸಿರಲಿಲ್ಲ. ಇನ್ನು ಮಗು ಬೇರೆ ಮಾಡಿಕೊಂಡು ಅದನ್ನೂ ಕಷ್ಟಕ್ಕೆ ದೂಡುವುದು ಇಷ್ಟವಿರಲಿಲ್ಲ. ನಾವು ಸರಿ ಹೋಗಿ ನಮ್ಮ ಜೀವನ ಸರಿ ಹೋಗಿದೆ ಎಂದು ಅನಿಸಿದ್ರೆ ಆ ಕ್ಷಣಕ್ಕೆ ಮಗು ಬಗ್ಗೆ ಯೋಚನೆ ಮಾಡುತ್ತಿದ್ದೆ. ಆದರೆ ಅದು ಹಾಗಿರಲಿಲ್ಲ. ಮಗುವನ್ನೂ ನೋಡಿಕೊಂಡು, ನಾನು ಕೆಲಸವನ್ನೂ ಮಾಡಿಕೊಂಡು ಮಗುವಿನ ಕಡೆಗೆ ಗಮನ ಕೊಡದೇ ಇರಲು ಸಾಧ್ಯವಿರಲಿಲ್ಲ. ಇನ್ನು ನನ್ನ ಗಂಡನ ಮನೆಯವರು ಆರ್ಥಿಕವಾಗಿ ಚೆನ್ನಾಗಿಯೇ ಇದ್ರು. ಆದರೆ ಹಾಗಂತ ನನ್ನ ಮಗುವನ್ನು ಅವರು ನೋಡಿಕೊಳ್ಳಲು ಸಾಧ್ಯವಿರಲಿಲ್ಲ. ಅದನ್ನು ನಾನೇ ನೋಡಿಕೊಳ್ಳಬೇಕಾಗಿತ್ತು. ಹೀಗಾಗಿ ನನಗೆ ಈ ರಿಲೇಷನ್ ಶಿಪ್ ಸರಿ ಹೋಗುತ್ತದೆ ಎಂದು ನಂಬಿಕೆ ಬರುವವರೆಗೂ ಮಗು ಮಾಡಿಕೊಳ್ಳಲು ಸಿದ್ಧವಿರಲಿಲ್ಲ ಎಂದುಕೊಂಡಿದ್ದೆ ಎಂದಿದ್ದಾರೆ.
ಇನ್ನು, ತಮ್ಮ ಹಾಗೂ ಪತಿಯ ಖಾಸಗಿ ಕ್ಷಣಗಳ ಫೋಟೋ ಲೀಕ್ ಆಗಿರುವುದರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಅದು ಖಂಡಿತಾ ನನ್ನ ಪತಿ ಮಾಡಿರಲು ಸಾಧ್ಯವಿರಲಿಲ್ಲ. ಆದರೆ ಆ ನಿನ್ನಿಂದಾಗಿ ನಮ್ಮ ಮನೆ ಮರ್ಯಾದೆ ಹೋಯ್ತು ಎಂದು ಗಂಡನ ಮನೆಯವರು ಹೇಳಿದ್ರು. ನನ್ನ ಗಂಡ ನಿನ್ನಿಂದಾಗಿ ನನ್ನ ಜೀವನ ಹಾಳಾಯ್ತು ಎಂದರು. ಆ ಕ್ಷಣ ಆ ರಿಲೇಷನ್ ಶಿಪ್ ನಿಂದ ಹೊರಬರಲು ನಿರ್ಧರಿಸಿದೆ ಎಂದಿದ್ದಾರೆ.