ಬೆಂಗಳೂರು: ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆಯವರಿಗೆ ತಿಳಿಸದೇ ಇಷ್ಟಪಟ್ಟ ಹುಡುಗನ ಜೊತೆ ಮದುವೆಯಾಗಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಇಎನ್ ಟಿ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ದಂಪತಿ ತಮ್ಮ ಮದುವೆ ಮತ್ತು ಮದುವೆ ಬಳಿಕ ಏನೇನಾಯ್ತು ಎನ್ನುವುದನ್ನು ವಿವರಿಸಿದ್ದಾರೆ.
ಮಾರ್ಚ್ 27 ರಂದು ಮನೆಯವರಿಗೂ ತಿಳಿಸದೇ ಜೀ ಕನ್ನಡದಲ್ಲಿ ಕೆಲಸ ಮಾಡುತ್ತಿರುವ ಅಭಿಶೇಕ್ ಜೊತೆ ಪೃಥ್ವಿ ಭಟ್ ಮದುವೆಯಾಗಿದ್ದರು. ಮದುವೆಯಾಗಿ 15 ದಿನಗಳ ಬಳಿಕ ಪೃಥ್ವಿ ಭಟ್ ತಂದೆ ತಮ್ಮ ಮಗಳ ಮದುವೆ ಬಗ್ಗೆ ನೋವಿನಿಂದ ಹೇಳಿದ್ದ ಮಾತುಗಳ ಅಡಿಯೋ ವೈರಲ್ ಆಗಿತ್ತು. ಇದರೊಂದಿಗೆ ಇಬ್ಬರ ಮದುವೆ ವಿಚಾರ ಬಹಿರಂಗವಾಗಿತ್ತು.
ಇದೀಗ ಯೂ ಟ್ಯೂಬ್ ಚಾನೆಲ್ ನಲ್ಲಿ ದಂಪತಿ ತಮ್ಮ ಪ್ರೀತಿ, ಮದುವೆ, ಅಪ್ಪ-ಅಮ್ಮನ ಮುನಿಸಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಒಂದು ವರ್ಷದ ಹಿಂದಷ್ಟೇ ನಾವು ಮದುವೆಯಾಗಬೇಕೆಂದು ತೀರ್ಮಾನಿಸಿದ್ದೆವು. ನನಗೆ ನಮ್ಮ ಟೀಂ ಸಪೋರ್ಟ್ ಇತ್ತು. ಹೀಗಾಗಿ ನಮ್ಮ ಪರಿಚಯದವರ ಮೂಲಕ ಪೃಥ್ವಿ ಮನೆಯಲ್ಲಿ ಮಾತನಾಡಲು ಹೇಳಿದ್ದೆ. ಆದರೆ ಅವರು ಒಪ್ಪಿರಲಿಲ್ಲ.
ಬಳಿಕ ನಮ್ಮ ಮದುವೆ ಆಗುತ್ತೋ ಇಲ್ವೋ ಎಂಬ ಭಯ ಶುರುವಾಗಿತ್ತು. ನಮ್ಮಿಬ್ಬರಿಗೂ ಮನೆಯಲ್ಲಿ ಬೇರೆಯದೇ ಹಲವು ಪ್ರಪೋಸಲ್ ಬರುತ್ತಿತ್ತು. ಕೊನೆಗೆ ಪೃಥ್ವಿಯನ್ನು ಕೇಳಿದೆ ಮದುವೆಯಾಗೋಣ್ವಾ ಎಂದು ಅವಳು ಸರಿ ಎಂದ ಮೇಲೆ ನಾವು ನಮ್ಮ ಕ್ಲೋಸ್ ಫ್ರೆಂಡ್ಸ್ ಸಹಾಯದಿಂದ ಎಲ್ಲಾ ತಯಾರಿ ಮಾಡಿಕೊಂಡ್ವಿ ಎಂದು ಅಭಿ ಹೇಳಿದ್ದಾರೆ.
ಪೃಥ್ವಿ ಕೂಡಾ ಮಾತನಾಡಿದ್ದು, ಮದುವೆ ದಿನವೂ ನನಗೆ ನನ್ನ ತಂದೆ-ತಾಯಿಯನ್ನು ಬಿಟ್ಟು ಮದುವೆಯಾಗ್ತಿದ್ದೇನೆ ಎಂಬ ಬೇಸರ ಖಂಡಿತಾ ಇತ್ತು. ಅದು ಈ ಕ್ಷಣದವರೆಗೂ ಇದೆ. ಆದರೆ ಬಹುಶಃ ನಾನು ಅಭಿಯನ್ನು ಬಿಟ್ಟು ಬೇರೆ ಯಾರನ್ನೇ ಮದುವೆಯಾಗಿದ್ರೂ ಇಷ್ಟು ಖುಷಿಯಾಗಿರ್ತಿರಲಿಲ್ಲ. ಮದುವೆಯಾದ ಬಳಿಕವೂ ನಾನು ಈಗಲೂ ನಾವು ಮಾಡಿದ್ದು ತಪ್ಪು ಎಂದೇ ಹೇಳೋದು. ಈಗಲೂ ನಾನು ಅವರಿಗೆ ಸಾರಿ ಹೇಳ್ತೀನಿ. ನಾನು ಈಗಲೂ ಅಪ್ಪನಿಗೆ ಮೆಸೇಜ್ ಮಾಡ್ತೀನಿ. ಮದುವೆಯಾದ ಬಳಿಕ ಅಪ್ಪನತ್ರ ಅಭಿ ಕೂಡಾ ಮಾತನಾಡಿದ್ರು. ಆದರೆ ಅವರಿಗೆ ಕೋಪ ಇದ್ದೇ ಇರುತ್ತಲ್ವಾ? ಬೈದಿದ್ರು. ಆದರೆ ಬೈದ್ರೂ ಆಶೀರ್ವಾದ ಎಂದೇ ಅಂದುಕೊಳ್ಳುತ್ತೇವೆ. ನೀವು ಚೆನ್ನಾಗಿ ಬದುಕಿ ತೋರಿಸಿ ಎಂದು ಹೇಳಿದ್ದಾರೆ. ಆಗಲಾದ್ರೂ ನಮ್ಮನ್ನು ಕ್ಷಮಿಸಬಹುದು ಎಂಬ ನಿರೀಕ್ಷೆ ನಮಗಿದೆ. ನಮ್ಮನ್ನು ಒಪ್ಪಿ ಒಮ್ಮೆ ಮನೆಗೆ ಕರೆಯಲಿ ಎಂದಷ್ಟೇ ನಮ್ಮ ಆಸೆ. ಅಪ್ಪನಿಗೆ ಈಗಲೂ ನಾನು ಮೆಸೇಜ್ ಹಾಕ್ತೇನೆ. ಅಪ್ಪನೂ ಅದಕ್ಕೆ ರಿಪ್ಲೈ ಮಾಡ್ತಾರೆ. ಆದರೆ ಅಮ್ಮನಿಗೆ ಮಾತ್ರ ಕೋಪ ಇದೆ. ಇದುವರೆಗೆ ಮಾತನಾಡಿಲ್ಲ ಎಂದು ಪೃಥ್ವಿ ಹೇಳಿದ್ದಾರೆ.
ಮದುವೆ ನಮ್ಮ ತಂದೆ-ತಾಯಿ ಕೂಡಾ ಬಂದಿರಲಿಲ್ಲ ಎಂದು ಅಭಿ ಹೇಳಿದ್ದಾರೆ. ನಾನು ಅವರಿಗೆ ಹೀಗೆ ಮದುವೆಯಾಗ್ತೀನಿ ಎಂದು ಹೇಳಿದ್ದೆ. ಆದರೆ ಆ ಹುಡುಗಿ ತಂದೆ-ತಾಯಿ ಬರಲ್ಲ ಅಲ್ವಾ ಹಾಗಾಗಿ ನಾವೂ ಬಂದರೆ ಚೆನ್ನಾಗಿರಲ್ಲ. ನಿಮ್ಮ ಇಷ್ಟ.. ಎಂದು ಆಶೀರ್ವಾದ ಮಾಡಿದ್ದರು. ಮದುವೆಯಾದ ಬಳಿಕ ಫೋನ್ ಮಾಡಿದಾಗ ಮನೆಗೆ ಬನ್ನಿ ಎಂದು ಕರೆದರು. ಈಗಲೂ ನಾವು ನನ್ನ ಅಪ್ಪ-ಅಮ್ಮನ ಜೊತೆಗೆ ಒಂದೇ ಮನೆಯಲ್ಲಿದ್ದೇವೆ ಎಂದಿದ್ದಾರೆ. ಇನ್ನು ಪೃಥ್ವಿ ಕೂಡಾ ಅಭಿ ಅಮ್ಮ ಅಂತೂ ನನ್ನನ್ನು ಮಗಳ ಥರಾನೇ ನೋಡ್ಕೊಳ್ತಾರೆ. ನನ್ನ ಕೈಯಲ್ಲಿ ಸ್ವಲ್ಪವೂ ಕೆಲಸ ಮಾಡಿಸಲ್ಲ ಎಂದಿದ್ದಾರೆ.