ಬೆಂಗಳೂರು: ನಿನ್ನೆ ನಿಧನರಾಗಿದ್ದ ಹಿರಿಯ ನಟ ಎಸ್. ಶಿವರಾಂ ಅಂತ್ಯಕ್ರಿಯೆ ಇಂದು ಪೊಲೀಸ್ ಗೌರವದೊಂದಿಗೆ ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿವಿಧಾನವನ್ನು ಬ್ರಾಹ್ಮಣ ಸಂಪ್ರದಾಯದಂತೆ ಪುತ್ರರು ನೆರವೇರಿಸಿದರು.
ಬಳಿಕ ಬನಶಂಕರಿ ಚಿತಾಗಾರಕ್ಕೆ ಕರೆದೊಯ್ಯಲಾಯಿತು. ಇಲ್ಲಿ ವಿಧಿ ವಿಧಾನದ ವೇಳೆ ಅಯ್ಯಪ್ಪ ಭಕ್ತರಾಗಿದ್ದ ಶಿವರಾಂಗೆ ಅಯ್ಯಪ್ಪ ಭಜನೆಯ ಮೂಲಕ ನಮನ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಅಯ್ಯಪ್ಪ ಮಾಲಾಧಾರಿಗಳು ಧರಿಸುವ ಖಾವಿ ಬಟ್ಟೆ, ತುಳಸಿ ಮಾಲೆ, ರುದ್ರಾಕ್ಷಿ ಸರ ಹಾಕಲಾಯಿತು.
ಬಳಿಕ ಪೊಲೀಸ್ ಗೌರವದೊಂದಿಗೆ ಶಿವರಾಂ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಉಪ ಮುಖ್ಯಮಂತ್ರಿ ಆರ್. ಅಶೋಕ್ ಸೇರಿದಂತೆ ರಾಜಕೀಯ ಗಣ್ಯರು, ಸ್ಯಾಂಡಲ್ ವುಡ್ ಕಲಾವಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.