ಕೃಷ್ಣವೇಣಿ ಕೆ.
ಬೆಂಗಳೂರು: ಚಿತ್ರರಂಗದ ಹಿರಿಯ ಕೊಂಡಿ ಎಸ್. ಶಿವರಾಂ ಅವರನ್ನು ಕಳೆದುಕೊಂಡ ಚಿತ್ರರಂಗ ಅನಾಥವಾಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಗೆ ಅತ್ಯಂತ ಆತ್ಮೀಯರಾಗಿದ್ದ ಶಿವರಾಮಣ್ಣನ ಬಗ್ಗೆ ವಿಷ್ಣು ಅಳಿಯ, ನಟ ಅನಿರುದ್ಧ ವೆಬ್ ದುನಿಯಾ ಜೊತೆ ಹಂಚಿಕೊಂಡಿದ್ದು ಹೀಗೆ.
ಅಪ್ಪಾವ್ರು ವಿಷ್ಣುವರ್ಧನ್ ಅವರನ್ನು ಚಿಕ್ಕಂದಿನಿಂದಲೂ ನೋಡಿಕೊಂಡು ಬಂದವರು ಶಿವರಾಮಣ್ಣ. ನಾಗರಹಾವು ಸಿನಿಮಾದಿಂದಲೂ ಒಟ್ಟಿಗೇ ಕೆಲಸ ಮಾಡಿದವರು. ಸಿನಿಮಾ ಹೊರತಾಗಿಯೂ ನಮ್ಮ ಕುಟುಂಬದವರಿಗೆ ಶಿವರಾಮಣ್ಣ ಎಂದರೆ ಅತ್ಯಂತ ಅಚ್ಚುಮೆಚ್ಚು. ಅಪ್ಪಾವ್ರು ಇದ್ದಾಗಲೂ, ಹೋದ ಮೇಲೂ ನಮ್ಮ ಕುಟುಂಬದವರ ಹಾಗೆ ನಮ್ಮ ಜೊತೆಗೇ ಇದ್ದರು. ನಮ್ಮ ಮನೆಯಲ್ಲಿ ಏನೇ ಪೂಜೆ, ಕಾರ್ಯಕ್ರಮ ಇರಲಿ ಶಿವರಾಮಣ್ಣ ಇರಲೇಬೇಕಿತ್ತು.
ಅಪ್ಪಾವ್ರು ಮತ್ತು ಶಿವರಾಮಣ್ಣ ಜೊತೆಗೇ ಮಾತಿಗೆ ಕೂತ್ರೆ ಮಗೀತು. ಗಂಟೆಗಟ್ಟಲೆ ಮಾತಾಡೋರು. ಶಿವರಾಮಣ‍್ಣನ ಕಾಲೆಳಿತಾ ಇದ್ರು ಅಪ್ಪಾವ್ರು. ಅವ್ರು ಹೋದ ಮೇಲೂ ನಮ್ಮ ಜೊತೆಗೇ ಇದ್ರು. ನಾನು ಇತ್ತೀಚೆಗೆ ಭಾರತಿ ಅಮ್ಮಾವ್ರ ಬಗ್ಗೆ ಸಾಕ್ಷ್ಯ ಚಿತ್ರ ಮಾಡಿದಾಗ ಮನಸಾರೆ ಹಾರೈಸಿದವರು ಶಿವರಾಮಣ್ಣ. ಭಾರತಿ ಅಮ್ಮಾವ್ರು ಅವರನ್ನು ಆಸ್ಪತ್ರೆಗೆ ಹೋಗಿ ಮಾತಾಡಿಸಿಕೊಂಡು ಬಂದರು. ಅವರು ನಮ್ಮ ಕುಟುಂಬದವರೇ. ಹಾಗಾಗಿ ಅವರಿಗಂತೂ ತುಂಬಾ ಬೇಸರವಾಗಿದೆ.
ಶಿವರಾಮಣ್ಣ ಎಂದರೆ ಅಪ್ಪಾವ್ರ ಅತ‍್ಯಂತ ಆತ್ಮೀಯ. ಯಾರೊಂದಿಗೂ ವಿವಾದವಿಲ್ಲ. ಅವರ ಮಾತು, ನಡೆ ಎಲ್ಲವೂ ಅಷ್ಟು ಗಂಭೀರ. ಅವರ ವ್ಯಕ್ತಿತ್ವವೇ ಹಾಗಿತ್ತು. ಯಾರಿಗೂ ತೊಂದರೆ ಕೊಟ್ಟವರಲ್ಲ. ಅಪಾರ ದೈವ ಭಕ್ತರು. ದೈವ ಭಕ್ತಿ ಎಂದರೆ ಕೇವಲ ಪೂಜೆ ಪುನಸ್ಕಾರಗಳಿಗೆ ಸೀಮಿತವಲ್ಲ. ಅವರ ವಿಚಾರಗಳೂ ಹಾಗೆಯೇ ಇದ್ದವು. ನಿಜವಾಗಿಯೂ ಸಾತ್ವಿಕರು.
ಪುನೀತ್ ಅವರ ನಿಧನ ಚಿತ್ರರಂಗಕ್ಕೆ ಒಂದು ಆಘಾತವಾದರೆ ಶಿವರಾಮಣ್ಣನ ಮೂಲಕ ಮತ್ತೊಂದು ಆಘಾತ. ಯಾಕೆಂದರೆ ಅವರಿಗೆ ವಯಸ್ಸು 84 ಆಗಿದ್ದರೂ ಈಗಲೂ ಅಷ್ಟು ಫಿಟ್ ಆಗಿದ್ದರು. ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಅವರಿಗೆ ಈ ರೀತಿ ಸಾವು ಬಂದಿದ್ದು ನಿಜಕ್ಕೂ ಬೇಸರ ತಂದಿದೆ.