ಬಿಗ್ ಬಾಸ್ ಕನ್ನಡ ಸೀಜನ್ 7ರ ವಿನ್ನರ್ ಕನ್ನಡ ಕಿರುತೆರೆ ಮತ್ತು ಹಿರಿತೆರೆ ನಟ ಶೈನ್ ಶೆಟ್ಟಿ ಅವರು ತಮ್ಮ ಜೀವನದ ಪ್ರಮುಖ ಅಧ್ಯಾಯವೊಂದನ್ನು ಅಂತ್ಯಗೊಳಿಸಿರುವ ಬಗ್ಗೆ ಅವರು ಬರೆದುಕೊಂಡಿದ್ದಾರೆ. ಹೌದು ಬಿಗ್‌ಬಾಸ್‌ಗೆ ಬರುವುದಕ್ಕೆ ಮುನ್ನಾ ಶೈನ್ ಶೆಟ್ಟಿ ಅವರು ಫುಡ್ ಟ್ರಕ್‌ವೊಂದನ್ನು ಆರಂಭಿಸಿದ್ದರು.
ಇದೀಗ ಆ ಫುಡ್ ಟ್ರಕ್‌ನ್ನು ಪೂರ್ಣ ವಿರಾಮ ಹಾಕಿರುವುದಾಗಿ ಶೈನ್ ಶೆಟ್ಟಿ ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ಶೈನ್ ಶೆಟ್ಟಿ ಅವರಷ್ಟೇ ಅವರ ಅಭಿಮಾನಿಗಳಿಗೂ ಬೇಸರ ತಂದಿದೆ.
ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ಜೀವನದ ಕೆಲವೊಂದು ಪ್ರಯಾಣ ನಮ್ಮ ಅಸ್ತಿತ್ವವನ್ನು ತೋರಿಸಿ ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತೆ ನನ್ನ ಲೈಫ್ ಅಲ್ಲಿ ಅದು ಗಲ್ಲಿ ಕಿಚನ್. ಜೀವನ ಸಾಗಿಸೋಕೆ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್ ನೀವೆಲ್ಲ ಇಷ್ಟಪಟ್ಟು ಕೊಂಡಾಡಿ ಎರಡು ಬ್ರಾಂಚ್‌ಗಳ ಹೋಟೆಲ್ ಮಟ್ಟಕ್ಕೆ ಪ್ರೀತಿಯಿಂದ ಬೆಳೆಸಿದ್ರಿ. ಆ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಶೈನ್ ಪತ್ರ ಬರೆದಿದ್ದಾರೆ.
ಬೆಳೆಯುತ್ತಾ ಬೆಳಸ್ತಾ ಮುಂದಕ್ಕೆ ಸಾಗೋದೆ ಜೀವನ ಅಲ್ವಾ. ಹಾಗಾಗಿ, ಮುಂದೊಂದಿಷ್ಟು ಕೆಲಸ ಮಾಡೋದ್ ಇದೆ. ಅದಕ್ಕಾಗಿ ಹೊಸದೊಂದು ಪ್ರಯಾಣ ಶುರು ಮಾಡಬೇಕಾಗಿದೆ. ಹಾಗಾಗಿ 6 ವರ್ಷಗಳ 'ಗಲ್ಲಿ ಕಿಚನ್' ಪ್ರಯಾಣಕ್ಕೆ ವಿದಾಯ ಹೇಳೋ ಸಮಯ. ವಿದಾಯ ಹೇಳೋದು ಇಲ್ಲಿ ಬರದಷ್ಟು ಸುಲಭ ಅಲ್ಲ ನಿಮಗೂ ಗೊತ್ತು. ಆದರೆ ಜೀವನದಲ್ಲಿ ದಿಕ್ಕು ಮತ್ತು ಗುರಿ ಬದಲಾದಾಗ ಅದಕ್ಕೆ ಹೊಂದಿಕೊಂಡು ಹೋಗೋದು ಅನಿವಾರ್ಯ. ಗಲ್ಲಿ ಕಿಚನ್ ಅನ್ನು ನನ್ನಂತೆ ಆಸಕ್ತಿ ಇರೋ ಯುವ ಪ್ರತಿಭೆಗೆ ಹಸ್ತಾಂತರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ಕನಸಿಗೆ ಹೊತ್ತಿದ್ದ ಜ್ವಾಲೆ ಇನ್ನು ಮುಂದೆ ಹೊಸ ಪಾಲುದಾರನ ಕೈಯಲ್ಲಿ ಹೊಸ ರೀತಿಯಲ್ಲಿ ಮುಂದುವರಿಯಲಿದೆ. ಶ್ರದ್ಧೆ ಇಂದ ಜನರ ಪ್ರೀತಿನ ಉಳ್ಕೊಂಡು ಬೆಳಸ್ಕೊಂಡು ಹೋಗ್ಲಿ ಅಂತ ಆಶಿಸ್ತೀನಿ. ತಿಂದುಂಡು ಹೊಗಳಿದ, ತಪ್ಪಿದ್ದಲ್ಲಿ ತಿದ್ದಿದ ನನ್ನೆಲ್ಲ ಅಭಿಮಾನಿಗಳೇ, ಭೋಜನ ಪ್ರಿಯರೇ, ಗಲ್ಲಿ ಕಿಚನ್ ಕುಟುಂಬಸ್ಥರೆ, ಮತ್ತೊಂದು ಪ್ರಯತ್ನದೊಂದಿಗೆ ಮರಳಿ ಬರುವೆ, ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರ ಪ್ರೀತಿ ಬೇಡುವೆ ಎಂದಿದ್ದಾರೆ.