ಕುಕ್ಕೆ ಸುಬ್ರಹ್ಮಣ್ಯ: ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ ಮತ್ತು ಪತಿ ವಿಘ್ನೇಶ್ ಶಿವನ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಸರ್ಪ ಸಂಸ್ಕಾರ ಸೇವೆ ಕೂಡ ನೆರವೇರಿಸಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ನಟಿ, ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ಅವರು ಬುಧವಾರ ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ದಂಪತಿ ಸರ್ಪಸಂಸ್ಕಾರ ಪೂಜೆಯಲ್ಲಿ ಭಾಗವಹಿಸಿ, ಕುಕ್ಕೆ ಸುಬ್ರಹ್ಮಣ್ಯ ದೇವರ ಆಶೀರ್ವಾದ ಪಡೆದರು.
ದೇವರ ದರ್ಶನದ ನಂತರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಅವರು ನಯನತಾರಾ ದಂಪತಿಗೆ ದೇವಾಲಯದ ಪರವಾಗಿ ಸ್ಮರಣಿಕೆಯೊಂದಿಗೆ ಸನ್ಮಾನಿಸಿದರು.
ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು, ನೆಚ್ಚಿನ ತಾರಾ ದಂಪತಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಪೂಜೆ ವೇಳೆ, ದೇವಾಲಯದ ಅರ್ಚಕರು ಹಾಗೂ ದೇವಸ್ಥಾನ ಸಿಬ್ಬಂದಿ ಅವರ ಸೇವೆಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದರು.
ನಯನತಾರಾ ಅವರು ಮಲಯಾಳಂ ಚಿತ್ರರಂಗದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿ ತಮಿಳು, ತೆಲುಗು, ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ.
ತಮ್ಮ ವಿಭಿನ್ನ ಪಾತ್ರಗಳ ಮೂಲಕ ಅದ್ಭುತ ಅಭಿನಯ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಂದಲೂ ಅವರು ಅಭಿಮಾನಿಗಳ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಅವರು ದಕ್ಷಿಣ ಭಾರತೀಯ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿದ್ದು, ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.