ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಜನಾರ್ಧನ್ ಇನ್ನಿಲ್ಲ. ಅನಾರೋಗ್ಯದಿಂದ ಬಳಕುತ್ತಿದ್ದ ಅವರು 76 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಪೋಷಕ ನಟ, ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ಅವರು ಸುಮಾರು 800 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದ್ದರು. 90 ರ ದಶಕದ ಬಹುತೇಕ ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ಧನ್ ಗೆ ಪಾತ್ರ ಇದ್ದೇ ಇತ್ತು.
ನಿನ್ನೆ ತಡರಾತ್ರಿ 2.30 ರ ಸುಮಾರಿಗೆ ಅವರು ಇಹಲೋಕ ತ್ಯಜಿಸಿದ್ದಾರೆ. ಇದೀಗ ಸುಲ್ತಾನ್ ಪಾಳ್ಯದ ಅವರ ನಿವಾಸದ ಎದುರು ಪಾರ್ಥಿವ ಶರೀರವನ್ನು ಇಡಲಾಗಿದೆ. ಸ್ಯಾಂಡಲ್ ವುಡ್ ಗಣ್ಯರು ಅವರ ಅಂತಿಮ ದರ್ಶನಕ್ಕೆ ಬರುವ ನಿರೀಕ್ಷೆಯಿದೆ.
1949 ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ್ದ ಅವರು 1985 ರಲ್ಲಿ ಪಿತಾಮಹ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.