Publish Date: Wed, 02 Jun 2021 (09:06 IST)
Updated Date: Wed, 02 Jun 2021 (09:11 IST)
ಬೆಂಗಳೂರು: ಕೊರೋನಾದಿಂದಾಗಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಸಿನಿಮಂದಿಗೆ ರಾಕಿಂಗ್ ಸ್ಟಾರ್ ಯಶ್ ವೈಯಕ್ತಿಕವಾಗಿ ಧನ ಸಹಾಯ ಮಾಡಲು ಮುಂದೆ ಬಂದಿದ್ದಾರೆ.
ಶೂಟಿಂಗ್ ಇಲ್ಲದೇ ಸಂಕಷ್ಟದಲ್ಲಿರುವ ಕಲಾವಿದರು, ತಂತ್ರಜ್ಞರಿಗೆ ತಮ್ಮ ಸ್ವಂತ ಹಣದಿಂದ ತಲಾ 5000 ರೂ.ಗಳಂತೆ ಪರಿಹಾರ ಒದಗಿಸುವುದಾಗಿ ಯಶ್ ಘೋಷಿಸಿದ್ದಾರೆ. ಸುಮಾರು 3000 ಕ್ಕೂ ಅಧಿಕ ಮಂದಿಗೆ ಈ ಸಹಾಯ ಧನ ತಲುಪಿಸಲಿದ್ದಾರೆ.
ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾ.ರಾ. ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ನಾಥ್ ಅವರೊಂದಿಗೆ ಚರ್ಚಿಸಿದ್ದೇನೆ. ನಮ್ಮ ಕಲಾವಿದರು, ತಂತ್ರಜ್ಞರ ಬ್ಯಾಂಕ್ ವಿವರ ತಲುಪಿದ ತಕ್ಷಣವೇ ಇದು ಕಾರ್ಯರೂಪಕ್ಕೆ ಬರಲಿದೆ. ಈ ಸಣ್ಣ ಸಹಾಯ ಪರಿಹಾರ ಎಂಬುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತರೆ ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ ಎಂದು ಯಶ್ ಹೇಳಿದ್ದಾರೆ.