ಬೆಂಗಳೂರು: ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಕತೆಯನ್ನು ಕರಾವಳಿಯ ಶ್ರೀಮಂತ ಸಂಸ್ಕೃತಿಯ ಸೊಗಡಿನ ಜೊತೆಗೆ ಪ್ರೇಕ್ಷಕರಿಗೆ ಕಟ್ಟಿ ಕೊಟ್ಟ ಸಿನಿಮಾ ಕಾಂತಾರ.
ಮೊದಲ ಶೋ ನೋಡಿದ ಜನ ನಿಜಕ್ಕೂ ಇದು ರಿಷಬ್ ಬತ್ತಳಿಕೆಯಿಂದ ಬಂದ ಮತ್ತೊಂದು ಅದ್ಭುತ, ಕನ್ನಡ ಸಿನಿಮಾ ರಂಗದ ಮತ್ತೊಂದು ಹೆಮ್ಮೆಯ ಸಿನಿಮಾ ಎಂದು ಕೊಂಡಾಡಿದ್ದಾರೆ. ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ರಿಷಬ್ ಈ ಸಿನಿಮಾ ಮೂಲಕವೂ ಅವಾರ್ಡ್ ಗೆಲ್ಲೋದು ಗ್ಯಾರಂಟಿ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಕರಾವಳಿಯ ಭೂತಕೋಲ ಮತ್ತು ಕಂಬಳ ಕ್ರೀಡೆಯನ್ನು ಇಷ್ಟರಮಟ್ಟಿಗೆ ತೋರಿಸಿದ ಉದಾಹರಣೆ ಇಲ್ಲ. ಆ ಮಟ್ಟಿಗೆ ಮೂಲ ಆಶಯಗಳಿಗೆ ಧಕ್ಕೆಯಾಗದಂತೇ ಮೈನವಿರೇಳಿಸುವಂತೆ ರಿಷಬ್ ಪ್ರೇಕ್ಷಕರ ಎದುರು ಭೂತಕೋಲವೆಂಬ ದೈವ ಕಲೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಕೊನೆಯ 15 ನಿಮಿಷ ಕ್ಲೈಮ್ಯಾಕ್ಸ್ ಅಂತೂ ಅದ್ಭುತ ಎಂಬುದು ಪ್ರೇಕ್ಷಕರ ಅಭಿಪ್ರಾಯ. ಒಬ್ಬ ನಿರ್ದೇಶಕನಾಗಿ ಜೊತೆಗೆ ಒಬ್ಬ ನಟನಾಗಿ ರಿಷಬ್ ಇಲ್ಲಿ ಎಲ್ಲರ ಗೆದ್ದಿದ್ದಾರೆ. ಜೊತೆಗೆ ತಮಗೆ ಸಿಕ್ಕ ಪಾತ್ರವನ್ನು ಹೊಸಬರೆಂದು ತೋರಿಸಿಕೊಳ್ಳದೇ ಸಪ್ತಮಿ ಗೌಡ ಚೊಕ್ಕದಾಗಿ ನಿಭಾಯಿಸಿದ್ದಾರೆ. ಅಂತೂ ಇದು ಕನ್ನಡಿಗರು ಎಂದೆಂದೂ ಮರೆಯದ ಸಿನಿಮಾ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
-Edited by Rajesh Patil