ಬೆಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಾಯಕರಾಗಿ ನಿನ್ನೆ ಹೊಸ ಸಿನಿಮಾ ಘೋಷಣೆಯಾಗಿದ್ದು ಇದಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಶಿವಾಜಿ ಮಹಾರಾಜನ ಕತೆಯಿರುತ್ತದೆ.
ಬಾಲಿವುಡ್ ನಿರ್ಮಾಪಕ ಕಮ್ ನಿರ್ದೇಶಕ ಸಂದೀಪ್ ಸಿಂಗ್ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ಒಪ್ಪಿಕೊಳ್ಳಲು ಕಾರಣವೇನೆಂದು ರಿಷಬ್ ಈಗ ಹೇಳಿಕೊಂಡಿದ್ದಾರೆ. ಕಾಂತಾರ ಸಿನಿಮಾ ಬಳಿಕ ದೇಶದಲ್ಲೆಡೆ ಗುರುತಿಸಿಕೊಂಡಿರುವ ರಿಷಬ್ ಈಗ ಬಾಲಿವುಡ್ ಗೂ ಕಾಲಿಡುತ್ತಿದ್ದಾರೆ.
ಈ ಸಿನಿಮಾವನ್ನು ಒಪ್ಪಿಕೊಳ್ಳಲು ಕಾರಣ ತಮಗೆ ಶಿವಾಜಿ ಮಹಾರಾಜರ ಮೇಲಿನ ಗೌರವ, ಅಭಿಮಾನ ಎಂದು ಅವರು ಹೇಳಿದ್ದಾರೆ. ಇದು ಕೇವಲ ಸಿನಿಮಾವಲ್ಲ. ಬೃಹತ್ ಆಗಿ ಬೆಳೆದಿದ್ದ ಮುಘಲ್ ರಾಜರ ವಿರುದ್ಧ ಸವಾಲುಗಳನ್ನು ಮೆಟ್ಟಿ ನಿಂತು ಹೋರಾಡಿದ ಕೆಚ್ಚೆದೆಯ ವೀರನ ಕತೆ. ಶಿವಾಜಿ ಮಹಾರಾಜನನ್ನು ನಮ್ಮ ದೇಶದ ಇತಿಹಾಸ ಯಾವತ್ತಿಗೂ ಮರೆಯದು ಎಂದು ರಿಷಬ್ ಹೇಳಿಕೊಂಡಿದ್ದಾರೆ.
ಈ ಸಿನಿಮಾದೊಂದಿಗೆ ರಿಷಬ್ ಈಗ ಏಕಕಾಲಕ್ಕೆ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿದಂತಾಗುತ್ತದೆ. ಈ ಪೈಕಿ ಕನ್ನಡದ ಕಾಂತಾರ ಶೂಟಿಂಗ್ ಕೊನೆಯ ಹಂತದಲ್ಲಿದ್ದು ಮುಂದಿನ ವರ್ಷ ತೆರೆ ಕಾಣುತ್ತಿದೆ. ಇದಾದ ಬಳಿಕ ತೆಲುಗಿನ ಜೈ ಹನುಮಾನ್ ಸಿನಿಮಾದಲ್ಲಿ ಆಂಜನೇಯನ ಪಾತ್ರ ಮಾಡಲಿದ್ದಾರೆ. ಅದರ ಜೊತೆಗೆ ಈಗ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಘೋಷಣೆಯಾಗಿದ್ದು ಈ ಮೂರೂ ಸಿನಿಮಾಗಳೂ ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ.