ಹೈದರಾಬಾದ್: ಕಪ್ಪು ಗ್ಲಾಮರಸ್ ಡ್ರೆಸ್ ನಲ್ಲಿ ಮೈಮಾಟ ಕಾಣುವಂತೆ ಯುವತಿಯೊಬ್ಬಳು ಲಿಫ್ಟ್ ಪ್ರವೇಶಿಸಿ ಕ್ಷಣದಲ್ಲೇ ಹೊರಗೆ ಬರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ನೋಡಿದವರು ಯಾರೇ ಆದರೂ ಇದು ರಶ್ಮಿಕಾ ಮಂದಣ್ಣ ಎಂದು ಒಂದು ಕ್ಷಣ ಅಂದುಕೊಳ್ಳುತ್ತಾರೆ. ಆ ಮಟ್ಟಿಗೆ ಈ ವಿಡಿಯೋದಲ್ಲಿರುವ ಯುವತಿಯನ್ನು ರಶ್ಮಿಕಾ ಮಂದಣ್ಣರಂತೆ ತೋರಿಸಲಾಗಿದೆ. ತಮ್ಮ ಬಗ್ಗೆ ನಕಲಿ ವಿಡಿಯೋವೊಂದು ಹರಿದಾಡುತ್ತಿರುವುದು ರಶ್ಮಿಕಾ ಗಮನಕ್ಕೂ ಬಂದಿದೆ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ನನ್ನ ನಕಲಿ ವಿಡಿಯೋ ಹರಿದಾಡುತ್ತಿರುವುದರ ಬಗ್ಗೆ ಇಲ್ಲಿ ಹೇಳಿಕೊಳ್ಳಬೇಕಾದ ಸ್ಥಿತಿ ಬಂದಿದ್ದರ ಬಗ್ಗೆ ನನಗೆ ನೋವಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿ ಈ ರೀತಿ ಒಬ್ಬರನ್ನು ನಕಲು ಮಾಡಲು ಸಾಧ‍್ಯವಾಗುತ್ತಿರುವುದು ಕೇವಲ ನನಗೆ ಮಾತ್ರವಲ್ಲ, ಎಲ್ಲಾ ಮಹಿಳೆಯರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಇಂದು ನಾನು ಒಬ್ಬ ನಟಿಯಾಗಿ, ನನಗೆ ಬೆಂಬಲವಾಗಿ ನಿಂತಿರುವ ಕುಟುಂಬ, ಸ್ನೇಹಿತರು, ಹಿತೈಶಿಗಳಿಗೆ ಧನ್ಯವಾದ ಹೇಳಬಯಸುತ್ತೇನೆ. ಆದರೆ ಇದು ನನ್ನ ಕಾಲೇಜು ದಿನಗಳಲ್ಲಿ ಆಗಿದ್ದರೆ ನಾನು ಇದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ಯೋಚಿಸಲೂ ಸಾಧ್ಯವಾಗುತ್ತಿಲ್ಲ. ಒಂದು ಸಮುದಾಯವಾಗಿ ಇಂತಹ ಸಮಸ್ಯೆಗಳ ವಿರುದ್ಧ ಹೋರಾಡಬೇಕಿದೆ. ಇಂತಹ ವಿಕೃತಿಗಳಿಗೆ ಮತ್ತಷ್ಟು ಮಹಿಳೆಯರು ಬಲಿಯಾಗುವ ಮೊದಲು ಇವುಗಳನ್ನು ನಿಭಾಯಿಸಬೇಕಿದೆ ಎಂದು ರಶ್ಮಿಕಾ ಹೇಳಿದ್ದಾರೆ.