ಬೆಂಗಳೂರು: ರಾಜಕುಮಾರ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹೊಸ ಜನ್ಮ ಕೊಟ್ಟ ಸಿನಿಮಾ. ಈ ಸಿನಿಮಾ ಮೂಲಕ ರಾಜ್ ಕುಮಾರ್ ರನ್ನೇ ನೋಡಿದೆವು ಎಂಬಂತೆ ಪುನೀತ್ ರನ್ನು ಅದೆಷ್ಟೋ ಮಂದಿ ಹೊಗಳಿದ್ದರು.
ಆ ಸಿನಿಮಾ ರಿಲೀಸ್ ಆಗಿ ಇಂದಿಗೆ ಎರಡು ವರ್ಷ. ಈ ಹಿನ್ನಲೆಯಲ್ಲಿ ಪುನೀತ್ ರಾಜ್ ಕುಮಾರ್ ಆ ಸಿನಿಮಾದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇಂತಹದ್ದೊಂದು ಸಿನಿಮಾ ಕೊಟ್ಟ ಚಿತ್ರತಂಡಕ್ಕೆ ವಿನಮ್ರವಾಗಿ ಧನ್ಯವಾದ ಸಲ್ಲಿಸಿದ್ದಾರೆ.
‘2015 ರಲ್ಲಿ ಈ ಸಿನಿಮಾ ಕತೆ ಡಿಸ್ಕಷನ್ ಆಯ್ತು. 2017 ರಲ್ಲಿ ರಿಲೀಸ್ ಆಯ್ತು. ಸಿನಿಮಾ ರಿಲೀಸ್ ಆದಾಗ ನೀವು ಕೊಟ್ಟ ಪ್ರೋತ್ಸಾಹ, ಬೊಂಬೆ ಹೇಳುತೈತೆ ಹಾಡಿನನ್ನು ನೀವು ಮೆಚ್ಚಿಕೊಂಡ ರೀತಿ ಎಲ್ಲವನ್ನೂ ನಾನು ಮರೆಯಕ್ಕಾಗಲ್ಲ. ಅದು ಅಪ್ಪಾಜಿ ಹೆಸರಿನಲ್ಲಿ ಮಾಡಿದ ಸಿನಿಮಾ. ಈ ಸಿನಿಮಾಗೆ ನೀವು ಕೊಟ್ಟ ಪ್ರೀತಿಯನ್ನು ನಾನು ಎಂದಿಗೂ ಮರೆಯಕ್ಕಾಗಲ್ಲ. ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಇದೇ ರೀತಿ ಮುಂದೆಯೂ ನಮ್ಮೆಲ್ಲರ ಸಿನಿಮಾಗಳಿಗೆ ನಿಮ್ಮ ಪ್ರೋತ್ಸಾಹ ಹೀಗೇ ಇರಲಿ’ ಎಂದು ಪುನೀತ್ ಸೋಷಿಯಲ್ ಮೀಡಿಯಾ ಮೂಲಕ ವಿಡಿಯೋ ಸಂದೇಶ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ