ಬೆಂಗಳೂರು: ಇನ್ನೇನು ಬಿಗ್ ಬಾಸ್ ಕನ್ನಡ ಸೀಸನ್ ಸದ್ಯದಲ್ಲೇ ಆರಂಭವಾಗಲಿದೆ. ಈ ಬಾರಿ ದೊಡ್ಮನೆಯೊಳಗೆ ಹೋಗಲಿರುವ ಸ್ಪರ್ಧಿಗಳು ಯಾರಿರಬಹುದು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಪ್ರತೀ ಬಾರಿಯೂ ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಸಾಕಷ್ಟು ಹೆಸರುಗಳು ಚರ್ಚೆಗೆ ಬರುತ್ತವೆ. ಈ ಬಾರಿಯೂ ಸಾಕಷ್ಟು ಹೆಸರುಗಳು ಕೇಳಿಬರುತ್ತಿವೆ. ಮೊನ್ನೆಯಷ್ಟೇ ಕಲರ್ಸ್ ವಾಹಿನಿ ಕಿಚ್ಚ ಸುದೀಪ್ ಜೊತೆಗೆ ಸುದ್ದಿಗೋಷ್ಠಿ ನಡೆಸಿತ್ತು. ಸದ್ಯದಲ್ಲೇ ಸೀಸನ್ 12 ಆರಂಭವಾಗಲಿರುವುದಾಗಿ ಹೇಳಿತ್ತು.
ಕಿಚ್ಚ ಸುದೀಪ್ ಅವರೇ ಈ ಬಾರಿಯೂ ಶೋ ನಡೆಸಿಕೊಡುವುದು ಈ ಮೂಲಕ ಕನ್ ಫರ್ಮ್ ಆಗಿತ್ತು. ಆದರೆ ಹೊಸ ಸೀಸನ್ ಆರಂಭ ಯಾವಾಗ ಎಂದು ಮಾಹಿತಿ ಕೊಟ್ಟಿಲ್ಲ. ಹಾಗಿದ್ದರೂ ಕೆಲವೊಂದು ಸ್ಪರ್ಧಿಗಳ ಹೆಸರು ಭಾರೀ ಚಾಲ್ತಿಯಲ್ಲಿದೆ.
ಸರಿಗಮಪ ಶೋ ಮೂಲಕ ಜನ ಮನ ಗೆದ್ದ ಬಾಳು ಬೆಳಗುಂದಿ, ಕಿರುತೆರೆ ನಟಿ ಸ್ವಾತಿ, ನಟ ಶ್ರೀ ಮಹದೇವ್, ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ ಬುರ್ಲಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಪಿಕಾ, ಸರಿಗಮಪ ಖ್ಯಾತಿಯ ಗಾಯಕ ಸುನಿಲ್ ಹೆಸರುಗಳು ಕೇಳಿಬರುತ್ತಿವೆ. ಇದರ ಜೊತೆಗೆ ಈ ಬಾರಿ ಕೆಲವು ಸಾಮಾನ್ಯ ಜನರಿಗೂ ಅವಕಾಶ ನೀಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.