ಬೆಂಗಳೂರು: ಕಿಚ್ಚ ಸುದೀಪ್ ಇಂದು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಮ್ಯಾಕ್ಸ್ ಮೂವಿ ಡೈರೆಕ್ಟರ್ ಜೊತೆ ಕಿಚ್ಚ ಕೆ47 ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ವರ್ಷಗಟ್ಟಲೆ ತೆಗೆದುಕೊಳ್ಳಲ್ಲ. ಈ ಮೂಲಕ ಕಿಚ್ಚ ಹೊಸ ಟ್ರೆಂಡ್ ಶುರು ಮಾಡ್ತಾರಾ ಎಂಬ ಕುತೂಹಲ ಎಲ್ಲರದ್ದು.
ಇತ್ತೀಚೆಗೆ ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳು ಬರುವುದೇ ಅಪರೂಪವಾಗಿದೆ. ಯಾವುದೇ ನಟರು ಸಿನಿಮಾ ಶುರು ಮಾಡಿದರೆ ಎರಡರಿಂದ ಮೂರು ವರ್ಷ ತೆಗೆದುಕೊಳ್ಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ರಿಷಭ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಎಲ್ಲಾ ನಟರೂ ಸಿನಿಮಾ ಘೋಷಣೆ ಮಾಡಿ ರಿಲೀಸ್ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದಾರೆ.
ಸುದೀಪ್ ಕೂಡಾ ವಿಕ್ರಾಂತ್ ರೋಣ ಬಳಿಕ ಮ್ಯಾಕ್ಸ್ ಸಿನಿಮಾಗೆ ತುಂಬಾ ಗ್ಯಾಪ್ ಕೊಟ್ಟಿದ್ದರು. ಆದರೆ ಮುಂದೆ ಹೀಗಾಗಲ್ಲ ಎಂದಿದ್ದರು. ಅದಕ್ಕೆ ತಕ್ಕಂತೆ ಈಗ ಸುದೀಪ್ ತಮ್ಮ ಕೆ47 ಸಿನಿಮಾವನ್ನು ಮುಂದಿನ ವಾರದಿಂದಲೇ ಚಿತ್ರೀಕರಣ ಆರಂಭಿಸಿ ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ವೇಳೆಗೆ ರಿಲೀಸ್ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.
ಈ ಮೂಲಕ ಮತ್ತೆ ಮೊದಲಿನಂತೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರು ಬೇಗ ಸಿನಿಮಾ ಮುಗಿಸಿ ಬೇಗ ರಿಲೀಸ್ ಮಾಡುವ ಹಳೆಯ ಪರಂಪರೆಗೆ ಕಿಚ್ಚ ಕಾರಣರಾಗುತ್ತಾರಾ ನೋಡಬೇಕಿದೆ. ಇಂದು ಕನ್ನಡ ಚಿತ್ರರಂಗ ಮೇಲೇಳಬೇಕಾದರೆ ಅದು ಅಗತ್ಯವೂ ಆಗಿದೆ.