ಬೆಂಗಳೂರು: ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ತಾರೆ ನಟಿ ಪ್ರೇಮಾಗೆ ಇಂದು 48 ನೇ ಜನ್ಮದಿನಕ್ಕೆ ಕಾಲಿಡುತ್ತಿದ್ದಾರೆ. ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನ ನಂ.1 ನಟಿಯಾಗಿ ಮೆರೆದ ಪ್ರೇಮಾ ವೈವಾಹಿಕ ಬದುಕು ವಿಚ್ಛೇದನದಲ್ಲಿ ಕೊನೆಯಾಗಿದ್ದು ಯಾಕೆ?
ಕೊಡಗಿನ ಸುಂದರಿ ಪ್ರೇಮಾ. ಸಾಹಸಸಿಂಹ ವಿಷ್ಣುವರ್ಧನ್, ಶಿವರಾಜ್ ಕುಮಾರ್ ಸೇರಿದಂತೆ ಕನ್ನಡದ ಘಟಾನುಘಟಿ ನಟರಿಗೆ ನಾಯಕಿಯಾಗಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಆದರೆ ತಮ್ಮ ವೃತ್ತಿ ಜೀವನ ಉತ್ತುಂಗದಲ್ಲಿದ್ದಾಗಲೇ ಮದುವೆಯಾದರು.
ತಮ್ಮ ಮನೆಯವರೇ ನೋಡಿ ನಿಶ್ಚಯಿಸಿ ಜೀವನ್ ಅಪ್ಪಚ್ಚು ಎಂಬವರೊಂದಿಗೆ ಪ್ರೇಮಾ ಮದುವೆಯಾದರು. 2006 ರಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ತಮ್ಮ ಕುಟುಂಬದವರಿಗೆ ಪರಿಚಯಸ್ಥರು ಎಂಬುದು ಒಂದು ಕಾರಣವಾದರೆ ತನ್ನ ತಂಗಿ 7 ವರ್ಷಗಳಿಂದ ಒಬ್ಬರನ್ನು ಪ್ರೀತಿಸುತ್ತಿದ್ದು ಆಕೆಯ ಮದುವೆಯಾಗಬೇಕಾದರೆ ತಾನು ಮದುವೆಯಾಗಬೇಕು ಎಂದು ಪೋಷಕರು ಹೇಳಿದ್ದರಿಂದ ಮದುವೆಗೆ ಒಪ್ಪಿದ್ದಾಗಿ ಪ್ರೇಮಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಆದರೆ ಮದುವೆ ಬಳಿಕ ತಾನು ಅಂದುಕೊಂಡಂತೆ ಇಲ್ಲ ತನ್ನ ಬದುಕು ಎಂದು ಪ್ರೇಮಾಗೆ ಅರಿವಾಗತೊಡಗಿತು. ಆರಂಭದಲ್ಲಿ ತಾನು ಅನುಭವಿಸುತ್ತಿದ್ದ ಮಾನಸಿಕ ಹಿಂಸೆ, ಹತಾಶೆ ಬಗ್ಗೆ ಯಾರಿಗೂ ಹೇಳಲಾಗದೇ ಒದ್ದಾಡಿದ್ದರಂತೆ. ಕೊನೆಗೆ ಧೈರ್ಯ ಮಾಡಿ ಪೋಷಕರಿಗೆ ಹೇಳಿದ್ದಾರೆ. ಬಳಿಕ ಮನೆಯವರೂ ಬೆಂಬಲ ನೀಡಿದ್ದರಿಂದ ಪತಿಯಿಂದ ವಿಚ್ಛೆದನ ಪಡೆದರು.
ಇಂದಿಗೂ ಪ್ರೇಮಾ ಒಂಟಿಯಾಗಿಯೇ ಇದ್ದಾರೆ. ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಸಿಕ್ಕರೆ ಮದುವೆಯಾಗಲು ರೆಡಿ ಎಂದು ತೀರಾ ಇತ್ತೀಚೆಗೂ ಹೇಳಿದ್ದರು. ಆದರೂ ಒಂಟಿಯಾಗಿರುವುದೂ ತನಗೇನೂ ಸಮಸ್ಯೆಯಲ್ಲ ಎಂದೂ ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಪ್ರೇಮಾ ಈಗಲೂ ಸಿಂಗಲ್ ಆಗಿಯೇ ಇದ್ದಾರೆ.