ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಚಂದ್ರಯಾನ 3 ಬಗ್ಗೆ ಜೋಕ್ ಮಾಡುವಂತಹ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.
ಸಾಮಾನ್ಯವಾಗಿ ಪ್ರಕಾಶ್ ರಾಜ್ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವಾಕ್ ಪ್ರಹಾರ ನಡೆಸುತ್ತಲೇ ಇರುತ್ತಾರೆ. ಆದರೆ ಈಗ ಮೋದಿ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ಚಂದ್ರಯಾನ 3 ಯೋಜನೆ ಬಗ್ಗೆಯೂ ವ್ಯಂಗ್ಯ ಮಾಡಿ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ.
ಲುಂಗಿ ತೊಟ್ಟ ವ್ಯಕ್ತಿಯೊಬ್ಬ ಚಹಾವನ್ನು ಎತ್ತಿ ಸೋಸುತ್ತಿರುವ ಫೋಟೋ ಪ್ರಕಟಿಸಿದ್ದ ಪ್ರಕಾಶ್ ರಾಜ್, ಚಂದ್ರನಿಂದ ಬಂದ ಮೊದಲ ಫೋಟೋ ಎಂದು ವಿಕ್ರಮ್ ಲ್ಯಾಂಡರ್ ನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು. ಇದಕ್ಕೆ ಅನೇಕರು ಕಿಡಿ ಕಾರಿದ್ದಾರೆ. ನಿಮಗೆ ರಾಜಕೀಯವಾಗಿ ಆಕ್ರೋಶವಿದ್ದರೆ ಅದನ್ನು ಈ ರೀತಿ ತೋರಿಸಬೇಡಿ. ಚಂದ್ರಯಾನ ಎನ್ನುವುದು ಯಾವುದೋ ಪಕ್ಷಕ್ಕೆ ಸೀಮಿತವಲ್ಲ. ಇದು ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ತಂಡದ ಸಾಧನೆ. ದೇಶದ ಹೆಮ್ಮೆ. ಇದರ ಬಗ್ಗೆ ಜೋಕ್ ಮಾಡಿ ನೀವು ಕೀಳುಮಟ್ಟಕ್ಕಿಳಿಯಬೇಡಿ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.
ತಮ್ಮ ಪೋಸ್ಟ್ ಗೆ ಟೀಕೆ ವ್ಯಕ್ತವಾಗುತ್ತಿದ್ದಂತೇ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ಧ್ವೇಷ, ಧ‍್ವೇಷವನ್ನೇ ನೋಡುತ್ತದೆ. ನಾನು ನಮ್ಮ ಕೇರಳದ ಚಹಾ ಮಾರುವವನನ್ನು ಉಲ್ಲೇಖಿಸಿ ಒಂದು ಜೋಕ್ ಮಾಡಿದ್ದೆ ಅಷ್ಟೇ. ನಿಮಗೆ ಜೋಕ್ ಅರ್ಥವಾಗದೇ ಇದ್ದರೆ ನಿಮಗೇ ನೀವು ಜೋಕ್ ಮಾಡಿಕೊಂಡಂತೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.