ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ನಿನ್ನೆಯಷ್ಟೇ ಕನ್ನಡದಲ್ಲಿ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ತಮಿಳು, ತೆಲುಗು, ಮಲಯಾಳಂನಲ್ಲೂ ಬಿಡುಗಡೆಯಾಗಲಿದೆ.
ರಕ್ಷಿತ್ ಶೆಟ್ಟಿ ಸಿನಿಮಾ ಮೊದಲ ದಿನವೇ ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಮೂರು ವರ್ಷಗಳಿಂದ ಸಿನಿಮಾಗಾಗಿ ರಕ್ಷಿತ್ ಮತ್ತು ಟೀಂ ಪಟ್ಟಿದ್ದ ಶ್ರಮ ಈ ಸಿನಿಮಾದಲ್ಲಿ ವ್ಯಕ್ತವಾಗುತ್ತಿತ್ತು.
ಆದರೆ ಈ ಶ್ರಮಕ್ಕೆ ನೀರೆರಚುವ ಪ್ರಯತ್ನವನ್ನು ಮತ್ತೆ ಪೈರಸಿಕೋರರು ಮಾಡಿದ್ದಾರೆ. ತಮಿಳು ರಾಕರ್ಸ್ ಎಂಬ ಅನಧಿಕೃತ ವೆಬ್ ಸೈಟ್ ಇತ್ತೀಚೆಗೆ ಕನ್ನಡದ ಪ್ರಮುಖ ಸಿನಿಮಾಗಳನ್ನು ಪೈರಸಿ ಮಾಡಿ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್ ಲೈನ್ ನಲ್ಲಿ ಹರಿಯಬಿಡುತ್ತಿದೆ. ಇದೀಗ ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನೂ ಇದೇ ವೆಬ್ ಸೈಟ್ ಪೈರೇಟೆಡ್ ವರ್ಷನ್ ಹರಿಯಬಿಟ್ಟಿದೆ. ಈ ಮೂಲಕ ಚಿತ್ರತಂಡಕ್ಕೆ ತಲೆನೋವಾಗಿದೆ.