Publish Date: Tue, 16 Jul 2024 (10:51 IST)
Updated Date: Tue, 16 Jul 2024 (10:52 IST)
ಬೆಂಗಳೂರು: ಕಷ್ಟದಲ್ಲಿ ಕೈ ಹಿಡಿಯಲು ಯಾರು ಬರುತ್ತಾರೋ ಅವರೇ ನಿಜವಾದ ಆಪತ್ ಬಾಂಧವರು ಎಂಬ ಮಾತು ಸುಮ್ಮನೇ ಹೇಳಿಲ್ಲ. ನಟ ದರ್ಶನ್ ವಿಚಾರದಲ್ಲಿ ಈಗ ಅದು ನಿಜವಾಗುತ್ತಿದೆ.
ನಟ ದರ್ಶನ್ ತಮ್ಮ ಯಶಸ್ಸಿನ ಉತ್ತುಂಗದಲ್ಲಿರುವಾಗ ಎಲ್ಲರೂ ಅವರ ಸುತ್ತ ಇದ್ದರು. ದರ್ಶನ್ ನಮ್ಮ ಅಣ್ಣ ಎಂದು ಸುತ್ತಾಡುತ್ತಿದ್ದರು. ಆದರೆ ಈಗ ಅವರು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ದರ್ಶನ್ ಗಾಗಿ ಹೋರಾಡುತ್ತಿರುವವರು ಈಗ ಇವರಿಬ್ಬರೇ.
ಒಬ್ಬರು ಅವರ ಸಹೋದರ ದಿನಕರ್ ತೂಗುದೀಪ ಮತ್ತು ಇನ್ನೊಬ್ಬರು ಅವರ ಪತ್ನಿ ವಿಜಯಲಕ್ಷ್ಮಿ. ವಿಪರ್ಯಾಸವೆಂದರೆ ದರ್ಶನ್ ಇದೇ ಪತ್ನಿ ಜೊತೆಗೆ ಈ ಹಿಂದೆ ಜಗಳ ಮಾಡಿಕೊಂಡು ಹಲ್ಲೆ ನಡೆಸಿ ಜೈಲು ಸೇರಿದ್ದರು. ಅದಾದ ಬಳಿಕ ಇಬ್ಬರೂ ಪ್ಯಾಚಪ್ ಆಗಿದ್ದರೂ ಗಂಡ-ಹೆಂಡತಿ ಸಂಬಂಧ ಮೊದಲಿನಂತಿರಲಿಲ್ಲ ಎಂದು ಅನೇಕರು ಹೇಳುತ್ತಿದ್ದರು.
ಅಷ್ಟೇ ಅಲ್ಲ, ದರ್ಶನ್ ಜೈಲಿಗೆ ಹೋಗಿ ಬಂದ ಮೇಲೆ ಸಾರಥಿಯಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟು ಹೊಸ ಜನ್ಮ ಕೊಟ್ಟ ದಿನಕರ್ ತೂಗುದೀಪ ಕೂಡಾ ಇತ್ತೀಚೆಗಿನ ದಿನಗಳಲ್ಲಿ ದರ್ಶನ್ ರಿಂದ ಅಂತರ ಕಾಯ್ದುಕೊಂಡಿದ್ದರು. ದರ್ಶನ್ ಪ್ರಪಂಚದಲ್ಲಿ ದಿನಕರ್ ಇರಲೇ ಇಲ್ಲ. ಅವರು ತಮ್ಮದೇ ಸ್ವಂತ ದುಡಿಮೆಯಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ತಮ್ಮದೇ ಜೀವನ ಮಾಡುತ್ತಿದ್ದರು.
ಆದರೆ ಈಗ ದರ್ಶನ್ ಕಷ್ಟದಲ್ಲಿದ್ದು, ಕೊಲೆ ಕೇಸ್ ನಲ್ಲಿ ಹೊರಬರಲಾಗದೇ ಒದ್ದಾಡುತ್ತಿದ್ದಾರೆ. ಈ ವೇಳೆ ಈ ಇಬ್ಬರೂ ದರ್ಶನ್ ಗೆ ನೆರವಾಗುತ್ತಿದ್ದಾರೆ. ಇದುವರೆಗೆ ಅವರು ಅಣ್ಣ, ಬಾಸ್ ಎಂದು ಹೇಳಿದವರೆಲ್ಲಾ ದೂರವಾಗಿದ್ದಾರೆ. ಪತಿಯ ರಕ್ಷಣೆಗಾಗಿ ಪ್ರಬಲ ನ್ಯಾಯವಾದಿಯನ್ನು ನೇಮಿಸಿ ಹೇಗಾದರೂ ಮಾಡಿ ಜಾಮೀನಿನ ಮೇಲೆ ಬಿಡಿಸಲು ವಿಜಯಲಕ್ಷ್ಮಿ ಪ್ರಯತ್ನಿಸುತ್ತಿದ್ದಾರೆ. ಅವರಿಗೆ ದಿನಕರ್ ಕೂಡಾ ಸಾಥ್ ನೀಡಿದ್ದಾರೆ. ಆಗಾಗ ವಿಜಯಲಕ್ಷ್ಮಿ ಜೈಲಿಗೆ ಹೋಗಿ ಪತಿಯನ್ನು ನೋಡಿಕೊಂಡು ಬಂದು ಧೈರ್ಯ ಹೇಳುತ್ತಿದ್ದಾರೆ. ಈಗಲಾದರೂ ದರ್ಶನ್ ತಮ್ಮ ನಿಜ ಮಿತ್ರರು ಯಾರು ಎಂದು ಅರ್ಥ ಮಾಡಿಕೊಂಡಿರಬಹುದು.