ಬೆಂಗಳೂರು: ಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿರುವ ನಟ ಜಗ್ಗೇಶ್, 'ಹೆಣ್ಣು ಮಕ್ಕಳನ್ನು ಗೌರವಿಸದವರು ರಾಕ್ಷಸರು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಎಂಥ ಕ್ರೂರಿಗಳು... ತಾಯಿ ಹೆಣ್ಣಲ್ಲವೆ?, ಅಕ್ಕತಂಗಿ ಹೆಣ್ಣಲ್ಲವೆ?, ಮಡದಿ ಹೆಣ್ಣಲ್ಲವೆ?, ಹೆಣ್ಣು ಗೌರವಿಸದವರು ರಾಕ್ಷಸರು. ಈ ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು. ಈ ಕ್ರೂರ ಕೃತ್ಯಕ್ಕೆ ಖಂಡನೆ' ಎಂದು ಬರೆದುಕೊಂಡಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರದ ಗುಡ್ಡದಲ್ಲಿ ಮಂಗಳವಾರ ರಾತ್ರಿ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ಐದು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ವಿಷಯ ಬುಧವಾರ ಗೊತ್ತಾಗಿತ್ತು.
ಆಕೆಯೊಂದಿಗೆ ಇದ್ದ ಸ್ನೇಹಿತನ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದೆ. ಹೀಗಾಗಿ ಇಬ್ಬರೂ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಹೊರರಾಜ್ಯದಿಂದ ಬಂದ ಕಾರ್ಮಿಕರೆಂದು ಪೊಲೀಸರು ಶಂಕಿಸಿದ್ದು, ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.