Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ದಾಖಲೆ ಮಟ್ಟದಲ್ಲಿ ಕೊರೊನಾ ಸೋಂಕು ಪತ್ತೆ: ಕೊರೊನಾ ಮೂರನೇ ಅಲೆ ಆರಂಭ?

ಕೇರಳದಲ್ಲಿ ದಾಖಲೆ ಮಟ್ಟದಲ್ಲಿ ಕೊರೊನಾ ಸೋಂಕು ಪತ್ತೆ: ಕೊರೊನಾ ಮೂರನೇ ಅಲೆ ಆರಂಭ?
ತಿರುವನಂತಪುರಂ , ಗುರುವಾರ, 26 ಆಗಸ್ಟ್ 2021 (10:02 IST)
ತಿರುವನಂತಪುರಂ: ಒಂದೆಡೆ ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೆ, ಮತ್ತೊಂದೆಡೆ ಕೇರಳದಲ್ಲಿ ದಾಖಲೆ ಮಟ್ಟದಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ ಕೇರಳದಲ್ಲಿ 31,445 ಹೊಸ ಪ್ರಕರಣ ದಾಖಲಾಗಿದ್ದು, ಇದು ಮೂರು ತಿಂಗಳಲ್ಲೇ ಗರಿಷ್ಠವಾಗಿದೆ. ಆ ಮೂಲಕ ರಾಜ್ಯದಲ್ಲಿ ಮೂರನೇ ಅಲೆ ಆರಂಭವಾಗಿದೆಯೇ ಎಂಬ ಆತಂಕ ಮೂಡಿದೆ.

ಓಣಂ ಹಬ್ಬದ ಬಳಿಕ ದಿನೇದಿನೆ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಮೇ 20ರಂದು ಕೇರಳದಲ್ಲಿ 30,491 ಮಂದಿಗೆ ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ 30 ಸಾವಿರ ದಾಟಿದೆ. ದೇಶಾದ್ಯಂತ 24 ಗಂಟೆಯಲ್ಲಿ 37,593 ಜನಕ್ಕೆ ಸೋಂಕು ತಗುಲಿದರೆ, ಇವರಲ್ಲಿ 31,445 ಜನ ಕೇರಳದವರೇ ಆಗಿರುವುದರಿಂದ ರಾಜ್ಯದಲ್ಲಿ ಮೂರನೇ ಅಲೆ ಆರಂಭವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.
ಕೊರೊನಾ ಮೂರನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದರೂ ಕಳೆದ ತಿಂಗಳಿಂದ ಪಿಣರಾಯಿ ವಿಜಯನ್ ನೇತೃತ್ವದ ಸರಕಾರವು ನಿಯಮ ಸಡಿಲಿಸುತ್ತಲೇ ಇದೆ. ಕಳೆದ ತಿಂಗಳು ಬಕ್ರೀದ್ ಹಿನ್ನೆಲೆಯಲ್ಲಿ ಕೊರೊನಾ ನಿರ್ಬಂಧ ಸಡಿಲಿಸಿದ ಪರಿಣಾಮ ನಿತ್ಯ ಸೋಂಕಿತರ ಸಂಖ್ಯೆ 20 ಸಾವಿರ ದಾಟಿತ್ತು. ಹಾಗಾಗಿಯೇ ಜುಲೈ 27ರಿಂದ ಇದುವರೆಗೆ ನಿತ್ಯ ಸರಾಸರಿ 20 ಸಾವಿರ ಪ್ರಕರಣಗಳೇ ದಾಖಲಾಗಿವೆ. ಈಗ ಓಣಂ ಹಿನ್ನೆಲೆಯಲ್ಲಿ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಆಗಸ್ಟ್ 21ರಂದು ಓಣಂ ಆಚರಿಸಲಾಗಿದೆ.
ಎರ್ನಾಕುಲಂ ಜಿಲ್ಲೆಯೊಂದರಲ್ಲೇ 4,048 ಪ್ರಕರಣ ದಾಖಲಾದರೆ, ತ್ರಿಶ್ಶೂರ್ನಲ್ಲಿ 3,865, ಕಲ್ಲಿಕೋಟೆ 3,680, ಮಲಪ್ಪುರಂ 3,502, ಪಾಲಕ್ಕಾಡ್ 2,562, ಕೊಲ್ಲಂ 2,479, ಕೊಟ್ಟಾಯಂನಲ್ಲಿ2,050 ಹೊಸ ಪ್ರಕರಣಗಳು ದಾಖಲಾಗಿವೆ. ಅತ್ತ ಸಾವಿನ ಸಂಖ್ಯೆಯೂ ಹೆಚ್ಚಾಗಿದ್ದು, ಒಂದೇ ದಿನದಲ್ಲಿ215 ಜನ ಮೃತಪಟ್ಟಿದ್ದಾರೆ.
ಕೊರೊನಾ ಪಾಸಿಟಿವಿಟಿ ಪ್ರಮಾಣವೂ ಶೇ.19ಕ್ಕೆ ಏರಿಕೆಯಾಗಿದೆ. ಮಂಗಳವಾರ ಸಹ 24 ಸಾವಿರ ಜನರಿಗೆ ಕೊರೊನಾ ದೃಢಪಟ್ಟಿತ್ತು. ದೇಶದ ಒಟ್ಟು ಸೋಂಕಿತರಲ್ಲಿ ಕೇರಳದ ಸೋಂಕಿತರ ಸಂಖ್ಯೆಯೇ ಬಹುಪಾಲು ಇರುವುದರಿಂದ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಟೀಕೆ ಸಹ ವ್ಯಕ್ತಪಡಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೆನೆಪದರ ಗುರುತಿಸಲು ಆರ್ಥಿಕ ಮಾನದಂಡ ಮಾತ್ರವೇ ಏಕೈಕ ಆಧಾರವಲ್ಲ: ಸುಪ್ರೀಂಕೋರ್ಟ್